ಶಬರಿಮಲೆ, ಜ 14 (DaijiworldNews/SM): ಕೇರಳದ ಪ್ರಸಿದ್ಧ ಕಾರಣಿಕ ಪುಣ್ಯಕ್ಷೇತ್ರವಾಗಿರುವ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಮಕರ ಸಂಕ್ರಮಣದ ಸಂದರ್ಭದಲ್ಲಿ ಭಕ್ತರಿಗೆ ಮಕರ ಜ್ಯೋತಿಯ ದರ್ಶನವಾಗಿದೆ.
ಮಕರ ಸಂಕ್ರಾಂತಿಯ ವೇಳೆ ಉತ್ತರ ಫಲ್ಗುಣಿ ನಕ್ಷತ್ರದಲ್ಲಿ ಅಯ್ಯಪ್ಪ ಸ್ವಾಮಿ ಜನನವಾಯಿತೆನ್ನುವ ನಂಬಿಕೆ ಭಕ್ತರಲ್ಲಿದೆ. ಇದೇ ಕಾರಣದಿಂದಾಗಿ ಪ್ರತಿ ವರ್ಷ ಮರಕ ಸಂಕ್ರಮಣದಂದು ಸ್ವಾಮಿಗಳು ಜ್ಯೋತಿಯ ಮೂಲಕ ದರ್ಶನ ನೀಡುತ್ತಾರೆ ಎಂಬುವ ನಂಬಿಕೆ ಭಕ್ತರಲ್ಲಿದೆ. ಅಲ್ಲದೆ, ಜ್ಯೋತಿಯ ದರ್ಶನದ ಮೂಲಕ ಭಕ್ತರ ಇಷ್ಟಾರ್ಥಗಳು ಈಡೇರುತ್ತವೆ ಎಂಬ ನಂಬಿಕೆಗಳು ಇಂದಿಗೂ ಮುಂದುವರೆದುಕೊಂಡು ಬಂದಿದೆ. ಇದಕ್ಕಾಗಿ ಸಾವಿರಾರು ಸಂಖ್ಯೆಯ ಭಕ್ತರು ಈ ಪುಣ್ಯದಿನದಂದು ಶಬರಿಮಲೆಗೆ ತೆರಳುತ್ತಾರೆ.
"ಸ್ವಾಮಿಯೇ ಶರಣಂ ಅಯ್ಯಪ್ಪ" ಎಂದು ಭಜನೆ ಮಾಡುತ್ತಾ ಭಕ್ತರು ಜ್ಯೋತಿಯನ್ನು ಕಂಡು ಭಾವಪರವಶರಾಗುತ್ತಾರೆ. ಆದರೆ, ಈ ವರ್ಷ ಕೊರೋನಾ ಕಾರಣದಿಂದ ಕ್ಷೇತ್ರಕ್ಕೆ ಆಗಮಿಸುವ ಭಕ್ತರಿಗೆ ನಿರ್ಬಂಧ ಹೇರಲಾಗಿದ್ದು, ಕೇವಲ ಐದು ಸಾವಿರ ಭಕ್ತರಿಗಷ್ಟೇ ಮಕರ ಜ್ಯೋತಿ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ.