ಮಧುರೈ, ಜ.14 (DaijiworldNews/HR): "ವಿವಾದಿತ ಮೂರು ಕೃಷಿ ಕಾಯ್ದೆಗಳನ್ನುಕೇಂದ್ರ ಸರ್ಕಾರವು ಹಿಂಪಡೆಯಲೇಬೇಕಾಗುತ್ತದೆ" ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಈ ಕುರಿತು ತಮಿಳುನಾಡಿನ ಅವನಿಯಪುರಂನಲ್ಲಿ ಜಲ್ಲಿಕಟ್ಟು ಕ್ರೀಡೆಯನ್ನು ವೀಕ್ಷಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನನ್ನ ಮಾತುಗಳನ್ನು ಬರೆದಿಟ್ಟುಕೊಳ್ಳಿ. ವಿವಾದಿತ ಕೃಷಿ ಕಾಯ್ದೆಗಳನ್ನು ಹಿಂಪಡೆಯವುದು ಸರ್ಕಾರಕ್ಕೆ ಅನಿವಾರ್ಯವಾಗಲಿದೆ" ಎಂದರು.
ಇನ್ನು "ಕೆಲವೇ ಕೆಲವು ಉದ್ಯಮಿಗಳ ಓಳಿತಿಗಾಗಿ ರೈತರ ಮೇಲೆ ದಬ್ಬಾಳಿಕೆ ಮಾಡಲಾಗುತ್ತಿದ್ದು, ಕೊರೊನಾ ವೈರಸ್ ಸಾಂಕ್ರಾಮಿಕ ರೋಗ ಬಂದಾಗ ಜನರಿಗೆ ನೆರವು ಮಾಡಿಲ್ಲ. ನೀವು ಯಾರ ಪ್ರಧಾನಿ? ನೀವು ಭಾರತದ ಪ್ರಧಾನ ಮಂತ್ರಿಯೇ ಅಥವಾ ಆಯ್ದ ಎರಡು ಮೂರು ಉದ್ಯಮಿಗಳ ಪ್ರಧಾನ ಮಂತ್ರಿಯೇ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ರೈತರು ದೇಶದ ಬೆನ್ನೆಲುಬು, ರೈತರ ಮೇಲೆ ದಬ್ಬಾಳಿಕೆ ಮಾಡಿ ದೇಶವನ್ನು ಮುನ್ನಡೆಸಬಹುದು ಎಂದು ಭಾವಿಸಬೇಡಿ. ರೈತರು ದುರ್ಬಲರಾದಗೆಲ್ಲ ದೇಶವೇ ದುರ್ಬಲವಾಗಿದೆ" ಎಂದು ಹೇಳಿದ್ದಾರೆ.