ನವದೆಹಲಿ, ಜ. 14 (DaijiworldNews/MB) : ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಹಿನ್ನೆಲೆಯಲ್ಲಿ ಈ ಮೂರು ಕಾಯ್ದೆಗಳಿಗೆ ತಡೆ ನೀಡಿರುವ ಸುಪ್ರೀಂ ಕೋರ್ಟ್ ಮಾತುಕತೆಗಾಗಿ ಸಮಿತಿಯೊಂದನ್ನು ರಚಿಸಿತ್ತು. ಇದೀಗ ಈ ಸಮಿತಿಯಿಂದ ಭೂಪಿಂದರ್ ಸಿಂಗ್ ಮನ್ ಹೊರ ನಡೆದಿದ್ದಾರೆ ಎಂದು ವರದಿಯಾಗಿದೆ.
ಈ ಬಗ್ಗೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ''ನನಗೆ ಈ ಕಾಯ್ದೆಗಳ ಬಗ್ಗೆ ರೈತರಿಗೆ ಇರುವ ಭಯ, ರೈತ ಸಂಘಟನೆ, ಜನರಿಗೆ ಇರುವ ಭಾವನೆ ತಿಳಿದಿದೆ. ರೈತರಿಗಾಗಿ ಹಾಗೂ ಪಂಜಾಬ್ಗಾಗಿ ನಾನು ಯಾವುದೇ ಹುದ್ದೆ ತ್ಯಜಿಸಲು ಸಿದ್ದನಾಗಿದ್ದೇನೆ. ನಾನು ರೈತರ ಈ ವಿಚಾರದಲ್ಲಿ ನಾವುದೇ ರಾಜಿಗೆ ತಯಾರಿಲ್ಲ'' ಎಂದು ತಿಳಿಸಿದ್ದಾರೆ.
ಇನ್ನು ಈಗಾಗಲೇ ಸುಪ್ರೀಂ ಕೋರ್ಟ್ನ ಈ ಸಮಿತಿಯನ್ನು ತಿರಸ್ಕರಿಸಿರುವ ರೈತ ಸಂಘಟನೆಗಳು, ''ಈ ಸಮಿತಿಯಲ್ಲಿರುವ ಎಲ್ಲರೂ ಕೃಷಿ ಕಾನೂನುಗಳ ಪರವಾದವರು'' ಎಂದು ಹೇಳಿದರು.
ಕಳೆದ ಒಂದೂವರೆ ತಿಂಗಳಿನಿಂದ ರೈತರು ದೆಹಲಿಯ ಹಲವು ಗಡಿಗಳಲ್ಲಿ ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳ ರದ್ದತಿಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.