ಬೆಂಗಳೂರು, ಜ. 14 (DaijiworldNews/MB) : ''ಬ್ಲಾಕ್ಮೇಲ್ ಮಾಡಿದವರು ಯಾರೇ ಆಗಿರಲಿ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ಧೈರ್ಯ ಮುಖ್ಯಮಂತ್ರಿಗಳಿಗಿದೆಯೇ'' ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪನವರನ್ನು ಪ್ರಶ್ನಿಸಿದ್ದಾರೆ.
"ಹಣ ಕೊಟ್ಟವರಿಗೆ ಹಾಗೂ ಬ್ಲ್ಯಾಕ್ ಮೇಲ್ ಮಾಡಿದವರಿಗೆ ಸಚಿವ ಸ್ಥಾನ ಸಿಕ್ಕಿದೆ. ಇನ್ನು ಕೆಲವರು ಸಿಡಿ ತೋರಿಸಿ ಯಡಿಯೂರಪ್ಪ ಅವರನ್ನು ಹೆದರಿಸಿ ಸಚಿವರಾಗಿದ್ದು, ಜೊತೆಗೆ ಇನ್ನು ಕೆಲವರು ಹಣ ನೀಡಿ ಸಚಿವರಾಗಿದ್ದಾರೆ" ಎಂಬ ಗಂಭೀರ ಆರೋಪವನ್ನು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾಡಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯನವರು, ''ಸಿ.ಡಿ ತೋರಿಸಿ ಬಿ. ಎಸ್. ಯಡಿಯೂರಪ್ಪ ಅವರನ್ನು ಬೆದರಿಸಿ, ಕೆಲವರು ಮಂತ್ರಿ ಹುದ್ದೆ ಪಡೆದಿದ್ದಾರೆ ಎಂದು ಬಿಜೆಪಿ ಶಾಸಕರೇ ಆರೋಪಿಸುತ್ತಿದ್ದಾರೆ. ಬ್ಲಾಕ್ಮೇಲ್ ಮಾಡಿದವರು ಯಾರೇ ಆಗಿರಲಿ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ಧೈರ್ಯ ಮುಖ್ಯಮಂತ್ರಿಗಳಿಗಿದೆಯೇ?'' ಎಂದು ಪ್ರಶ್ನಿಸಿದ್ದಾರೆ.
''ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರ ಕುಟುಂಬ ರಾಜಕಾರಣದ ಬಗ್ಗೆ ಬಿಜೆಪಿ ನಾಯಕರಿಗೆ ತಡವಾಗಿ ಜ್ಞಾನೋದಯವಾಗಿದೆ. ಯಡಿಯೂರಪ್ಪ ನಾಮಕಾವಸ್ತೆ ಮುಖ್ಯಮಂತ್ರಿ, ನಿಜವಾದ ಅಧಿಕಾರ ಚಲಾಯಿಸುತ್ತಿರುವುದು ಅವರ ಮಗ ಎಂದು ನಾನು ಬಹಳ ಹಿಂದೆಯೇ ಹೇಳಿದ್ದೆ. ಕೆಲವರಿಗೆ ಈಗೀಗ ಸತ್ಯ ಗೊತ್ತಾಗ್ತಿದೆ'' ಎಂದು ಹೇಳಿದ್ದಾರೆ.
''ಬಿ. ಎಸ್. ಯಡಿಯೂರಪ್ಪ ಅವರ ಕುರ್ಚಿ ಗಟ್ಟಿಯಾಗಿದ್ದರೆ ಸಂಪುಟ ವಿಸ್ತರಣೆಗಾಗಿ ಹೈಕಮಾಂಡ್ ಬಳಿ ಗೋಗರೆಯುವ, ಕೈಕಾಲು ಹಿಡಿಯುವ ಅಗತ್ಯವಿರುತ್ತಿರಲಿಲ್ಲ. ಕೆಲವರಿಗೆ ಮಂತ್ರಿ ಸ್ಥಾನ ಕೊಡಲು ಕಾನೂನಿನ ತೊಡಕಿದೆ ಅಂತ ಗೊತ್ತಿದ್ರೂ ಸುಳ್ಳು ವಾಗ್ದಾನ ನೀಡಿ ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ. ಹಾಗಾಗಿ ಬಿಜೆಪಿ ಸೇರಿದ ಕೆಲವರು ಬಾಯಿ ಬಡ್ಕೊತಿರೋದು'' ಎಂದು ವ್ಯಂಗ್ಯವಾಡಿದ್ದಾರೆ.