ರಾಯಚೂರು, ಜ.14 (DaijiworldNews/HR): ನನಗೆ ಸಚಿವ ಸ್ಥಾನ ಸಿಗಲಿಲ್ಲ ಅನ್ನುವುದಕ್ಕಿಂತ, ಭ್ರಷ್ಟ, ದಲ್ಲಾಳಿ ಸಿ.ಪಿ.ಯೋಗೀಶ್ವರ್ಗೆ ಸಚಿವ ಸ್ಥಾನ ನೀಡಿರುವುದು ನನಗೆ ಅಪಥ್ಯವಾಗಿದ್ದು, ತಕ್ಷಣ ಅವರನ್ನು ಸಂಪುಟದಿಂದ ಕೈ ಬಿಡಲಿ ಎಂದು ಮಾಜಿ ಸಚಿವ ಎಚ್.ವಿಶ್ವನಾಥ್ ಒತ್ತಾಯಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಸಂಪುಟ ವಿಸ್ತರಣೆ, ಪುನರ್ ರಚನೆ ಮುಖ್ಯಮಂತ್ರಿಯ ಪರಮಾಧಿಕಾರ. ಆದರೆ ಭ್ರಷ್ಟನನ್ನು ಸಚಿವರನ್ನಾಗಿ ಮಾಡುವುದು ಎಷ್ಟು ಸರಿ. 9,731 ಜನರಿಂದ ಮೆಗಾಸಿಟಿ ಹೆಸರಲ್ಲಿ ನೂರಾರು ಕೋಟಿ ರೂ. ಕೊಳ್ಳೆ ಹೊಡೆದಿದ್ದಾನೆ. ಆತನ ವಿರುದ್ಧ ಜನ ನ್ಯಾಯಾಂಗ ಹೋರಾಟ ನಡೆಸಿದ್ದಾರೆ. ನ್ಯಾಯಾಲಯ ಕೂಡ ತನಿಖೆಗೆ ನಿರ್ದೇಶಿಸಿದ್ದು, ಇಂತಹ ವ್ಯಕ್ತಿಗೆ ಸಚಿವ ಸ್ಥಾನ ನೀಡುವುದು ಎಷ್ಟು ಸರಿ" ಎಂದು ಪ್ರಶ್ನಿಸಿದ್ದಾರೆ.
ಇನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮೇಲೆ ಅಪಾರ ನಂಬಿಕೆ ಇಟ್ಟು 17 ಜನ ಶಾಸಕಾಂಗ ಸ್ಥಾನಕ್ಕೆ ರಾಜೀನಾಮೆ ನೀಡಿ ಸರ್ಕಾರ ರಚಿಸಿದ್ದೇವೆ. ಆದರೆ, ದಲಿತ ಸಚಿವರನ್ನು ಕೈ ಬಿಟ್ಟು ಒಬ್ಬ ಭ್ರಷ್ಟನಿಗೆ ಸಚಿವ ಸ್ಥಾನ ನೀಡಿರುವುದು ತಪ್ಪು ನಿರ್ಧಾರ ಮುನಿರತ್ನರಂಥವನ್ನು ಯಾಕೆ ಸಂಪುಟಕ್ಕೆ ಸೇರಿಸಿಕೊಂಡಿಲ್ಲ" ಎಂದು ಹೇಳಿದ್ದಾರೆ.