ಮಧುರೈ, ಜ.14 (DaijiworldNews/PY): ತಮಿಳುನಾಡಿನ ಅವನಿಯಪುರಂನಲ್ಲಿ ಗುರುವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಜಲ್ಲಿಕಟ್ಟು ಕ್ರೀಡೆ ವೀಕ್ಷಿಸಿದರು.
ಗುರುವಾರ ಮಕರ ಸಂಕ್ರಾತಿ (ಪೊಂಗಲ್) ಹಬ್ಬದ ಆಚರಣೆಗಾಗಿ ರಾಹುಲ್ ಗಾಂಧಿ ಅವರು ದೆಹಲಿಯಿಂದ ತಮಿಳುನಾಡಿಗೆ ಆಗಮಿಸಿದ್ದರು.
ಪೊಂಗಲ್ ಹಬ್ಬದ ದಿನದಂದು ಜಲ್ಲಿಕಟ್ಟು ಕ್ರೀಡೆಯನ್ನು ನಡೆಸಲಾಗುತ್ತದೆ. ಈ ಸಂದರ್ಭ ಡಿಎಂಕೆ ಯುವ ಘಟಕದ ಕಾರ್ಯದರ್ಶಿ ಉದಯನಿಧಿ ಸ್ಟಾಲಿನ್ ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಪ್ರತ್ಯೇಕವಾದ ವೇದಿಕೆಯಲ್ಲಿದ್ದ ಉಭಯ ನಾಯಕರು ನಂತರ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.
ಕಾಂಗ್ರೆಸ್ ಹಾಗೂ ಡಿಎಂಕೆ ಈ ಬಾರಿಯ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಜೊತೆಯಾಗಿ ಎದುರಿಸಲಿವೆ ಎನ್ನಲಾಗಿದೆ.