ಬೆಂಗಳೂರು, ಜ. 14 (DaijiworldNews/MB) : ''ನಿಮ್ಮ ಅಧ್ಯಕ್ಷರು ಜೈಲಿನಲ್ಲಿದ್ದಾಗ ಬಿಟ್ಟ ಗಡ್ಡವನ್ನೇ ಇನ್ನೂ ತೆಗೆದಿಲ್ಲ, ನೆನಪಿರಲಿ'' ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯರಿಗೆ ತಿರುಗೇಟು ನೀಡುವ ನೆಪದಲ್ಲಿ ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕಾಲೆಳೆದಿದ್ದಾರೆ.
''ಗೋಮಾಂಸ ತಿನ್ನುವುದೇ ಮೈಸೂರು ಮುಖಂಡನ ಸಾಧನೆ ಎಂದು ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಆದರೆ ನಾನು ಈವರೆಗೆ ಗೋಮಾಂಸವನ್ನು ತಿಂದಿಲ್ಲ. ಜನರ ದುಡ್ಡು ತಿಂದು ಜೈಲಿಗೆ ಹೋಗೋದೇ ಶಿವಮೊಗ್ಗ ಮುಖಂಡನ ಸಾಧನೆ ಎಂದು ಹೇಳಿಕೊಳ್ಳಲು ಅವರು ಯಾಕೋ ಮರೆತಿದ್ದಾರೆ'' ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯನವರು ಬುಧವಾರ ಟ್ವೀಟ್ ಮೂಲಕ ಕಿಡಿಕಾರಿದ್ದರು.
ಈ ಟ್ವೀಟ್ಗೆ ತಿರುಗೇಟು ನೀಡಿರುವ ಶ್ರೀ ರಾಮುಲು, ''ತಮ್ಮ ಬಾಳೆಯಲ್ಲಿ ಹೆಗ್ಗಣ ಬಿದ್ದಿರುವಾಗ ಪಕ್ಕದ ಬಾಳೆಯಲ್ಲಿ ನೊಣ ಹೊಡೆಯುವ ಉತ್ಸಾಹವೇಕೆ ಸಿದ್ದರಾಮಯ್ಯನವರೇ? ಯಾರು ಯಾಕಾಗಿ ಶ್ರೀ ಬಿ.ಎಸ್.ಯಡಿಯೂರಪ್ಪ ಸಾಹೇಬರ ಮೇಲೆ ಆರೋಪ ಹೊರಿಸಿದರು ಎಂಬುದು ಗೊತ್ತಿದೆ. ಆದರೆ ಕೋರ್ಟ್ ಅವರನ್ನು ನಿರ್ದೋಶಿ ಎಂದಿದೆ. ನಿಮ್ಮ ಅಧ್ಯಕ್ಷರು ಜೈಲಿನಲ್ಲಿದ್ದಾಗ ಬಿಟ್ಟ ಗಡ್ಡವನ್ನೇ ಇನ್ನೂ ತೆಗೆದಿಲ್ಲ, ನೆನಪಿರಲಿ'' ಎಂದು ಟಾಂಗ್ ನೀಡಿದ್ದಾರೆ.