ದಾವಣಗೆರೆ,ಜ.14 (DaijiworldNews/HR): ಕೇಂದ್ರದ ನಾಯಕರ ಅಪೇಕ್ಷೆಯಂತೆ ನನ್ನ ಇತಿ-ಮಿತಿಯೊಳಗೆ ಏನು ಮಾಡೋಕೋ ಸಾಧ್ಯವೋ ಅದರಂತೆ ಸಚಿವ ಸಂಪುಟ ವಿಸ್ತರಣೆ ಮಾಡಿದ್ದೇನೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಈ ಕುರಿತು ಜಿಎಂಐಟಿ ಹೆಲಿಪ್ಯಾಡ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಯಶಸ್ವಿಯಾಗಿ ಮಂತ್ರಿ ಮಂಡಲದ ವಿಸ್ತರಣೆ ಮಾಡಲಾಗಿದ್ದು, ಕೇಂದ್ರ ನಾಯಕರ ಅಪೇಕ್ಷೆಯಂತೆ ಒಂದು ಸ್ಥಾನ ಖಾಲಿ ಉಳಿಸಿಕೊಳ್ಳಲಾಗಿದೆ" ಎಂದರು.
ಇನ್ನು "ಸಚಿವ ಸ್ಥಾನ ದೊರೆಯದಿರುವ 10-12 ಜನರು ಆರೋಪ ಮಾಡುತ್ತಿರುವುದು ಕೇಳಿ ಬರುತ್ತಿದ್ದು, ಆವರಲ್ಲಿ ವಿನಂತಿ ಮಾಡಿಕೊಳ್ಳುವುದೇನಂದರೆ ಕೇಂದ್ರದ ನಾಯಕರ ಮುಂದೆ ಆರೋಪ ಮಾಡಲು, ದೂರು ನೀಡಲು ಯಾರು ಅಡ್ಡಿ ಮಾಡಿಲ್ಲ. ಇಲ್ಲಿ ಹೇಳಿಕೆ ಕೊಡುವ ಮೂಲಕ ಗೊಂದಲದ ವಾತಾವರಣ ಉಂಟು ಮಾಡಿ ವಾತಾವರಣ ಕೆಡಿಸುವುದು, ಪಕ್ಷದ ಶಿಸ್ತಿಗೆ ಧಕ್ಕೆ ತರುವುದು ಬೇಡ" ಎಂದು ಹೇಳಿದ್ದಾರೆ.
"ಜನವರಿ ತಿಂಗಳ ಕೊನೆಗೆ ವಿಧಾನ ಮಂಡಲ ಅಧಿವೇಶನ ನಡೆಯಲಿದ್ದು, ಮಾರ್ಚ್ನಲ್ಲಿ ಹಣಕಾಸಿನ ಇತಿಮಿತಿ, ರೈತರ ಪರ ಬಜೆಟ್ ಮಂಡನೆ ಮಾಡಲಾಗುವುದು" ಎಂದು ತಿಳಿಸಿದ್ದಾರೆ.