ಮಂಗಳೂರು, ಜ.14 (DaijiworldNews/HR): "ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಪಕ್ಷದ ಸದಸ್ಯರೇ ಅವಮಾನ ಮಾಡುತ್ತಿದ್ದಾರೆ" ಎಂದು ಮಾಜಿ ಸಚಿವ ಯುಟಿ ಖಾದರ್ ಹೇಳಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, "ಸಚಿವ ಸ್ಥಾನ ಕುರಿತು ಆಡಳಿತ ಪಕ್ಷದ ಸದಸ್ಯರೇ ಸರ್ಕಾರದ ವಿರುದ್ಧ ಹೇಳಿಕೆ ನೀಡುತ್ತಿದ್ದು, ಪಕ್ಷದ ಶಾಸಕರುಗಳೇ ಸಚಿವ ಸ್ಥಾನದ ಮಾನದಂಡದ ಬಗ್ಗೆ ಮುಖ್ಯಮಂತ್ರಿಯನ್ನು ಪ್ರಶ್ನಿಸಿ ಏಕವಚನದಲ್ಲಿ ಮಾತನಾಡಿ ಅವರಿಗೆ ಅವಮಾನ ಮಾಡುತ್ತಿದ್ದಾರೆ" ಎಂದರು.
ಇನ್ನು "ಪ್ರಧಾನ ಮಂತ್ರಿಗೆ ಅವಮಾನ ಮಾಡಿದ್ರೆ ದೇಶದ್ರೋಹ ಎಂದು ಹೇಳುತ್ತಾರೆ, ಆದರೆ ಪ್ರಧಾನಿಗೆ ಇರುವ ಅದೇ ಗೌರವ ಮುಖ್ಯಮಂತ್ರಿಗೂ ಸಿಗಬೇಕಲ್ವೇ? ಇದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷರು ಸ್ಪಷ್ಟತೆ ನೀಡಬೇಕು" ಎಂದು ಆಗ್ರಹಿಸಿದ್ದಾರೆ.
ಸಿ.ಡಿ. ಕುರಿತಾಗಿ ಶಾಸಕ ಯತ್ನಾಳ್ ನೀಡಿರುವ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, "ಜನರು ಎಲ್ಲಾ ವಿಚಾರವನ್ನು ಅರ್ಥ ಮಾಡಿಕೊಳ್ಳಬೇಕು, ಆಡಳಿತದಲ್ಲಿರೋ ಸರ್ಕಾರದ ಸದಸ್ಯರೇ ಅಸಮಾಧಾನ ತೋಡಿಕೊಂಡಿದ್ದಾರೆ. ಮುಖ್ಯಮಂತ್ರಿಯವರೇ ಮುನಿರತ್ನಗೆ ಸಚಿವ ಸ್ಥಾನ ಕೊಡದ್ದಕ್ಕೆ ಸ್ಪಷ್ಟನೆ ನೀಡಬೇಕು" ಎಂದರು.
ಆಡಳಿತ ಪಕ್ಷದ ಸದಸ್ಯರೇ ಸರ್ಕಾರದ ವಿರುದ್ಧ ಹೇಳಿಕೆ ನೀಡುತ್ತಿದ್ದು, ಶಾಸಕ ಸುನಿಲ್ ಕುಮಾರ್ ಅವರು ಟ್ವೀಟ್ ಮಾಡಿ ಸಚಿವ ಸ್ಥಾನಕ್ಕಾಗಿ 'ಬ್ಲ್ಯಾಕ್ ಮೇಲ್' ನಡೆದಿದೆ ಎಂದು ತಿಳಿಸಿದ್ದು, ಈ ್ ಟ್ವೀಟ್ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷರು ಸ್ಪಷ್ಟತೆ ನೀಡಬೇಕು" ಎಂದಿದ್ದಾರೆ.
ಇನ್ನು "ಮುಂಬೈಯಲ್ಲಿ ಕೂತು ಸರಕಾರ ಬೀಳಿಸುವಾಗಲೇ ಮುಂದೆ ನಿಮಗೂ ಇಂತಹದ್ದೇ ಸ್ಥಿತಿ ಎದುರಾಗಲಿದೆ ಎಂದು ನಾವು ಎಚ್ಚರಿಸಿದ್ದೆವು. ಇದಕ್ಕೆಲ್ಲಾ ಕಾಂಗ್ರೆಸ್ ಕೈವಾಡ ಎಂದು ಹೇಳದಿರಿ ಯಾಕೆಂದರೆ ಬಿಜೆಪಿಯವರಿಗೆ ಬೇರೆ ಉತ್ತರ ನೀಡಲು ಗೊತ್ತಿಲ್ಲ" ಎಂದು ಹೇಳಿದ್ದಾರೆ.
"ಸುಳ್ಯ ಶಾಸಕ ಎಸ್.ಅಂಗಾರರಿಗೆ ಸಚಿವ ಸ್ಥಾನ ದೊರಕಿದ ಕುರಿತು ಪ್ರತಿಕ್ರಿಯಿಸಿದ ಖಾದರ್, ಕೊನೆಗೂ ಸುಳ್ಯ ಜನತೆಯ ಬೇಡಿಕೆ ಈಡೇರಿದ್ದು, ಎಸ್.ಅಂಗಾರ ಅವರು ಸಚಿವರಾಗಿರುವುದು ನಮಗೆ ಖುಷಿ ವಿಚಾರ, ಮಂಗಳೂರಿನ ಹೊಸ ಸಚಿವರಿಗೆ ನಾವು ಸದಾ ಬೆಂಬಲ ಕೊಡುತ್ತೇವೆ" ಎಂದರು.
ತಾಲೂಕು ಪಂಚಾಯತ್ ವ್ಯವಸ್ಥೆ ರದ್ದು ಎಂಬ ವಿಚಾರವಾಗಿ ಮಾತನಾಡಿದ ಅವರು, "ತಾಲೂಕು ಮಟ್ಟದ ಅಭಿವೃದ್ಧಿಯನ್ನು ಜಿಲ್ಲಾಡಳಿತ ನೇರವಾಗಿ ನೋಡಲು ಆಗುತ್ತದೆಯೇ? ಆಡಳಿತ ವಿಕೇಂದ್ರೀಕರಣ ಎಷ್ಟು ಸರಿ?" ಎಂದು ಪ್ರಶ್ನಿಸಿದ್ದು, ರದ್ದು, ಬಂದ್ ಮಾಡುವುದು ಸರ್ಕಾರದ ಕೆಲಸವಲ್ಲ ಬದಲಾಗಿ ಸ್ಥಳೀಯ ಪ್ರತಿನಿಧಿಗಳಿಗೆ ಅಧಿಕಾರ ಕೊಡುವುದು ಸರ್ಕಾರದ ಕೆಲಸ" ಎಂದು ಹೇಳಿದ್ದಾರೆ.