ಬೆಂಗಳೂರು, ಜ. 14 (DaijiworldNews/MB) : ಸಿ.ಡಿ ತೋರಿಸಿ ಬ್ಲ್ಯಾಕ್ ಮೇಲ್ ಮಾಡಿ, ಹಣ ನೀಡಿ ಸಚಿವ ಸ್ಥಾನ ಪಡೆಯಲಾಗಿದೆ ಎಂಬ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪದ ಬಗ್ಗೆ ಬಿಜೆಪಿ ರಾಜ್ಯದ ಜನತೆಗೆ ಉತ್ತರಿಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, ''ಬಿಜೆಪಿ ಶಾಸಕರು ಬ್ಲಾಕ್ ಮೇಲ್ ಮಾಡಿದ್ದು ಯಾರನ್ನ, ಬ್ಲಾಕ್ಮೇಲ್ ಮಾಡುವಂತಹ ಹಗರಣ ಏನದು? ಸಿ.ಡಿ ವಿಷಯ ಏನದು? ಮಂತ್ರಿಗಿರಿಗಾಗಿ ವಿಜಯೇಂದ್ರರಿಗೆ ಹಣ ನೀಡಲಾಗುತ್ತದೆ ಎಂದರೆ ಅಧಿಕಾರಿಗಳು, ಶಾಸಕರು, ಗುತ್ತಿಗೆದಾರರು ಇನ್ನೆಷ್ಟು ನೀಡಬೇಕು?'' ಎಂದು ಪ್ರಶ್ನಿಸಿದ್ದು, ''ಬಿಜೆಪಿಗರೇ ಆರೋಪಿಸಿದ ಈ ಗಂಭೀರ ವಿಷಯಗಳ ಬಗ್ಗೆ ರಾಜ್ಯದ ಜನತೆಗೆ ಬಿಜೆಪಿ ಉತ್ತರಿಸಲೇಬೇಕು'' ಎಂದು ಒತ್ತಾಯಿಸಿದೆ.
ಸಚಿವ ಸ್ಥಾನ ಪಡೆದ ಶಾಸಕರ ಪಟ್ಟಿ ಬಿಡುಗಡೆಯಾದ ಬಳಿಕ ಬಿಜೆಪಿಯೊಳಗೆ ಅಸಮಾಧಾನ ಭುಗಿಳೆದ್ದಿದೆ. "ಹಣ ಕೊಟ್ಟವರಿಗೆ ಹಾಗೂ ಬ್ಲ್ಯಾಕ್ ಮೇಲ್ ಮಾಡಿದವರಿಗೆ ಸಚಿವ ಸ್ಥಾನ ಸಿಕ್ಕಿದೆ. ಇನ್ನು ಕೆಲವರು ಸಿಡಿ ತೋರಿಸಿ ಯಡಿಯೂರಪ್ಪ ಅವರನ್ನು ಹೆದರಿಸಿ ಸಚಿವರಾಗಿದ್ದು, ಜೊತೆಗೆ ಇನ್ನು ಕೆಲವರು ಹಣ ನೀಡಿ ಸಚಿವರಾಗಿದ್ದಾರೆ" ಎಂಬ ಗಂಭೀರ ಆರೋಪವನ್ನು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾಡಿದ್ದಾರೆ. ಇನ್ನು ಕೆಲವು ಅತೃಪ್ತ ಶಾಸಕರು ಪಕ್ಷದ ಉಸ್ತುವಾರಿ ಅರುಣ್ಸಿಂಗ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.