ಬೆಂಗಳೂರು, ಜ.14 (DaijiworldNews/PY): "ಹಗರಣ ಮಾಡಿದ ಶಾಸಕರಿಗೆ, ಶಾಸಕರ ನಡುವೆ ವಿಷಬೀಜ ಬಿತ್ತಿದವರಿಗೆ ಸಚಿವ ಸ್ಥಾನ ನೀಡಲಾಗಿದೆ" ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಆರೋಪಿಸಿದ್ದಾರೆ.
ದೆಹಲಿಗೆ ಹೊರಟ ಅವರು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದು, "ಮಧ್ಯ ಕರ್ನಾಟಕಕ್ಕೆ ಅನ್ಯಾಯವಾಗಿದೆ. ಸಚಿವ ಸಂಪುಟದಲ್ಲಿ ಬೆಳಗಾವಿ ಹಾಗೂ ಬೆಂಗಳೂರಿಗೆ ಸ್ಥಾನ ನೀಡಲಾಗಿದೆ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
"ಪ್ರಧಾನಿ ನರೇಂದ್ರ ಮೋದಿ ಅವರ ಮುಖ ನೋಡಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಜನ ಬೆಂಬಲ ನೀಡಿದ್ದಾರೆ. ಸಿ.ಪಿ.ಯೋಗೀಶ್ವರ್ ಮುಖ ನೋಡಿ ಬೆಂಬಲ ನೀಡಿದ್ದಲ್ಲ. ಆದರೆ, ಯೋಗೇಶ್ವರ್ ಅವರು ಪಕ್ಷಕ್ಕೆ ಹಾಗೂ ಸರ್ಕಾರಕ್ಕೆ ಏನು ಕೊಡುಗೆ ನೀಡಿದ್ದಾರೆ?" ಎಂದು ಕೇಳಿದ್ದಾರೆ.
"ಲೋಕಸಭೆ ಚುನಾವಣೆಗೆ ಬೇರೆ ಅಭ್ಯರ್ಥಿಗಳನ್ನು ನಿಲ್ಲಿಸಿ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದ್ದರು. ಮೆಗಾಸಿಟಿ ದೊಡ್ಡ ಹಗರಣ ನಡೆಸಿದ್ದಾರೆ. ನಮ್ಮ ನಾಯಕರನ್ನು ಭೇಟಿ ಮಾಡಿ ಹಗರಣದ ವಿಚಾರವಾಗಿ ದೂರು ನೀಡುವೆ. ಸಮಯ ಬಂದಾಗ ಆ ವಿಷಯವನ್ನೆಲ್ಲಾ ಬಹಿರಂಗಪಡಿಸುತ್ತೇನೆ" ಎಂದಿದ್ದಾರೆ.
"ನಾನು ದೆಹಲಿಯಲ್ಲಿ ಯಾವುದೇ ನಾಯಕರನ್ನು ಭೇಟಿಯಾಗಲು ಸಮಯ ನಿಗದಿ ಮಾಡಿಲ್ಲ. ಯಾರಾದರೂ ಸಿಕ್ಕಲ್ಲಿ ಮಾತನಾಡುತ್ತೇನೆ. ಸಚಿವ ಸ್ಥಾನ ಸಿಗದೇ ಇರುವ ಬಗ್ಗೆ ನೋವಿದೆ" ಎಂದು ಹೇಳಿದ್ದಾರೆ.