ನವದೆಹಲಿ, ಜ.14 (DaijiworldNews/PY): ಇಂದು ದೇಶಾದ್ಯಂತ ವರ್ಷದ ಮೊದಲ ಹಬ್ಬವಾದ ಸಂಕ್ರಾಂತಿಯನ್ನು ಆಚರಣೆ ಮಾಡಲಾಗುತ್ತಿದ್ದು, ಈ ಪ್ರಯುಕ್ತ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಹಾಗೂ ಸಿಎಂ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ದೇಶದ ಹಲವು ಗಣ್ಯರು ನಾಡಿನ ಜನತೆಗೆ ಸಂಕ್ರಾಂತಿ ಹಬ್ಬದ ಶುಭಾಶಯ ತಿಳಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮೂಲಕ ಶುಭಕೋರಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು, "ಮಕರ ಸಂಕ್ರಾಂತಿಯ ಈ ಶುಭ ಸಂದರ್ಭದಲ್ಲಿ ನಾನು ನಾಡಿನ ಜನತೆಗೆ ಶುಭಾಶಯ ತಿಳಿಸುತ್ತೇನೆ. ಈ ಹಬ್ಬವು ಸ್ನೇಹ, ಪ್ರೀತಿ, ಸೌಹಾರ್ದತೆ, ಬಾಂಧವ್ಯವನ್ನು ಬಲಪಡಿಸಲಿ ಹಾಗೂ ದೇಶದಲ್ಲಿ ಸಮೃದ್ಧಿ ಹಾಗೂ ಸಂತೋಷವನ್ನು ಹೆಚ್ಚಿಸಲಿ" ಎಂದಿದ್ದಾರೆ.
ಪ್ರಧಾನಿ ಮೋದಿ ಅವರು ಶುಭಾಶಯ ತಿಳಿಸಿದ್ದು, "ಮಕರ ಸಂಕ್ರಾಂತಿ ಹಬ್ಬವನ್ನು ದೇಶದ ಹಲವು ಭಾಗಗಳಲ್ಲಿ ಬಹಳ ಉತ್ಸಾಹದಿಂದ ಆಚರಿಸಲಾಗುತ್ತದೆ. ಈ ಹಬ್ಬವು ಭಾರತದ ವೈವಿಧ್ಯತೆ ಹಾಗೂ ನಮ್ಮ ಸಂಪ್ರದಾಯಗಳನ್ನು ತಿಳಿಸುತ್ತದೆ. ಇದು ಭೂಮಿ ತಾಯಿಯನ್ನು ಗೌರವಿಸುವ ಸಂಕೇತವಾಗಿದೆ" ಎಂದು ತಿಳಿಸಿದ್ದಾರೆ.
"ನಾಡಿಗೆ ಆವರಿಸಿರುವ ಸಾಂಕ್ರಾಮಿಕದ ಕರಿಛಾಯೆ ದೂರಸರಿಯಲಿ, ಸಂತಸ, ಸಮೃದ್ಧಿಗಳ ಹೊಂಗಿರಣ ಎಲ್ಲೆಡೆ ಪಸರಿಸಲಿ. ಈ ಸುಗ್ಗಿಕಾಲವು ಎಲ್ಲರಿಗೂ ಆರೋಗ್ಯ, ಯಶಸ್ಸು, ನಲಿವುಗಳನ್ನು, ವಿಶೇಷವಾಗಿ ಅನ್ನದಾತ ರೈತನಿಗೆ ನೆಮ್ಮದಿಯನ್ನು ಹೊತ್ತು ತರಲಿ, ನಾಡು ಪ್ರಗತಿ ಪಥದಲ್ಲಿ ಮುನ್ನಡೆಯಲಿ. ನಾಡಿನ ಜನತೆಗೆ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು" ಎಂದು ಸಿಎಂ ಬಿಎಸ್. ಯಡಿಯೂರಪ್ಪ ಅವರು ತಿಳಿಸಿದ್ದಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಅವರು ಶುಭಕೋರಿದ್ದು, "ನಾಡಿನ ಸಮಸ್ತ ಜನತೆಗೆ ಮಕರ ಸಂಕ್ರಾಂತಿಯ ಶುಭಾಶಯಗಳು. ಸಂಕ್ರಾಂತಿ ಎಂದರೆ ಸುಗ್ಗಿಯ ಹಬ್ಬ, ಸಮೃದ್ಧಿಯ ಹಬ್ಬ, ಸೊಗಡಿನ ಹಬ್ಬ. ಈ ಉತ್ತರಾಯಣ ಪುಣ್ಯಕಾಲ ಎಲ್ಲರ ಬಾಳಲ್ಲಿ ಉತ್ತರೋತ್ತರ ಶ್ರೇಯಸ್ಸು, ಅಭಿವೃದ್ಧಿ ಮತ್ತು ನೆಮ್ಮದಿ ತರಲಿ ಎಂದು ಸ್ವಾಮಿ ಸೂರ್ಯ ನಾರಾಯಣನನ್ನು ಪ್ರಾರ್ಥಿಸುತ್ತೇನೆ" ಎಂದಿದ್ದಾರೆ.