National
20 ನೇ ವರ್ಷದ ಹೊಸ್ತಿಲಲ್ಲಿ ದೈಜಿವರ್ಲ್ಡ್ ಡಾಟ್ ಕಾಮ್ - ಸ್ಥಳೀಯ ಮನರಂಜನೆಗಾಗಿ ಒಟಿಟಿ ವೇದಿಕೆ
- Thu, Jan 14 2021 10:20:55 AM
-
ವಾಲ್ಟರ್ ನಂದಳಿಕೆ, ದೈಜಿವರ್ಲ್ಡ್ ಮೀಡಿಯಾ ಗ್ರೂಪ್ನ ಪ್ರಧಾನ ಸಂಪಾದಕರು
ಮಂಗಳೂರು, ಜ. 14 (DaijiworldNews/MB) :
ಪ್ರಿಯಾ ಓದುಗರೇ,
ಶುಭ ಮಕರ ಸಂಕ್ರಾಂತಿಯ ದಿನವಾದ ಜನವರಿ 14, 2001 ರಂದು ನಾವು ದೈಜಿವರ್ಲ್ಡ್ ಡಾಟ್ ಕಾಮ್ ಆರಂಭಿಸಿದ್ದು ಇಂದು 20 ನೇ ವರ್ಷಕ್ಕೆ ಕಾಲಿರಿಸಿದ್ದೇವೆ. ದುಬೈನಲ್ಲಿ ಒಂದು ಸಣ್ಣ ಹೆಜ್ಜೆಯಾಗಿ ಎನ್ಆರ್ಐ ಉದ್ಯಮಿ ರೊನಾಲ್ಡ್ ಕೊಲಾಸೊ ಉದ್ಘಾಟಿಸಿದ ದೈಜಿವರ್ಲ್ಡ್.ಕಾಮ್ ಈಗ 20 ವರ್ಷದ ಸಂಭ್ರಮದಲ್ಲಿದೆ. ಪ್ರತಿ ಐದು ವರ್ಷಗಳಿಗೊಮ್ಮೆ ನಮ್ಮ ಯಶಸ್ಸನ್ನು ಆಚರಿಸಲು ನಾವು ಕಾರ್ಯಕ್ರಮಗಳನ್ನು ಯೋಜಿಸಿದ್ದೆವು. ಆದರೆ ಪ್ರಸ್ತುತ ಪರಿಸ್ಥಿತಿಯ ಹಿನ್ನೆಲೆ ನಾವು ಈ ಸಂಭ್ರಮವನ್ನು ಆಚರಿಸದಿರಲು ನಿರ್ಧರಿಸಿದ್ದೇವೆ. ಆದರೆ ಈ ಯಶಸ್ಸಿನ ಮೈಲಿಗಲ್ಲು ಏರಲು ಬೆಂಬಲ ನೀಡಿದ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸದ್ದಿದ್ದರೆ, ಈ ಮೈಲಿಗಲ್ಲಿಗೆ ಅರ್ಥವಿಲ್ಲ.
ಆರಂಭಿಕ ದಿನಗಳಲ್ಲಿ ಕೇವಲ 50 ರಿಂದ 100 ವೆಬ್ಸೈಟ್ ಸಂದರ್ಶಕರೊಂದಿಗೆ ಪ್ರಾರಂಭಿಸಿದ ದೈಜಿವರ್ಲ್ಡ್.ಕಾಮ್ ಇಂದು ಸರಾಸರಿ 1.3 ಮಿಲಿಯನ್ ಮಾಸಿಕ ಸಂದರ್ಶಕರನ್ನು ಹೊಂದಿದೆ. ಈ ಅದ್ಭುತ ಪ್ರಯಾಣಕ್ಕೆ ಬೆಂಬಲಿಸಿದ ನಿಮ್ಮೆಲ್ಲರಿಗೂ ಧನ್ಯವಾದಗಳು. ಪ್ರಾಯೋಜಕರು, ಕೊಡುಗೆದಾರರು, ತಂಡದ ಸದಸ್ಯರು, ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ನಮ್ಮನ್ನು ಬೆಂಬಲಿಸಿದ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು. ನೀವು ಈವರೆಗೆ ನೀಡಿದ ಬೆಂಬಲ, ಪ್ರೋತ್ಸಾಹ, ಸಲಹೆಗಾಗಿ ನಿಮಗೆ ನಾವು ಆಭಾರಿ.
ಲೋಕಲ್ವುಡ್ - ಸ್ಥಳೀಯ ಭಾಷೆಗಳಿಗಾಗಿ ಒಟಿಟಿ ವೇದಿಕೆ
ಕರಾವಳಿ ಕರ್ನಾಟಕದ ಮಾಧ್ಯಮ ಕ್ಷೇತ್ರದಲ್ಲಿ ತನ್ನದೇ ಆದ ಕೊಡುಗೆ ನೀಡಿರುವ ದೈಜಿವರ್ಲ್ಡ್.ಕಾಮ್ ಈಗ ತನ್ನ 20 ವರ್ಷಗಳ ಸಂಭ್ರಮದ ನೆನಪು ಅಚ್ಚಳಿಯದೆ ಉಳಿಯಲು, ಕರಾವಳಿ ಕರ್ನಾಟಕದಲ್ಲಿ ಮೊದಲ ಬಾರಿಗೆ ತುಳು, ಕೊಂಕಣಿ, ಬ್ಯಾರಿ ಹಾಗೂ ಕನ್ನಡದಲ್ಲಿ ಮನರಂಜನಾ ಉದ್ದೇಶದಿಂದ ಒಟಿಟಿ (ಓವರ್-ದಿ-ಟಾಪ್) ವೇದಿಕೆಯನ್ನು ಪ್ರಾರಂಭಿಸುತ್ತಿದ್ದೇವೆ. ಲೋಕಲ್ವುಡ್ ಒಟಿಟಿ ಅಪ್ಲಿಕೇಶನ್ ಮುಂದಿನ ಕೆಲವು ದಿನಗಳಲ್ಲಿ ಸಾರ್ವಜನಿಕರಿಗೆ ಲಭ್ಯವಾಗಲಿದೆ. ತುಳು, ಕೊಂಕಣಿ ಚಲನಚಿತ್ರಗಳು, ವೆಬ್ ಸರಣಿಗಳು, ಸಂಗೀತ ಪ್ರದರ್ಶನಗಳನ್ನು ಉಚಿತ ಮತ್ತು ಪಾವತಿಸಿದ ಎರಡೂ ವಿಧಾನಗಳಲ್ಲಿ ಪ್ರಾರಂಭಿಸಲು ನಾವು ಉತ್ಸುಕರಾಗಿದ್ದೇವೆ. ಈ ಮೆಗಾ ಯೋಜನೆಗೆ ಎಟಿಸಿ ಆನ್ಲೈನ್ನೊಂದಿಗಿನ ನಮ್ಮ ಸಹಭಾಗಿತ್ವಕ್ಕೆ ಕಾರಣೀಭೂತರಾದ ಅಂತರರಾಷ್ಟ್ರೀಯ ಮಟ್ಟದ ಪ್ರಸಿದ್ಧ ಕಾರ್ಪೊರೇಟ್ ವೃತ್ತಿಪರ ಐವನ್ ಫೆರ್ನಾಂಡಿಸ್ ಅವರಿಗೆ ಧನ್ಯವಾದಗಳು. ಲೋಕಲ್ವುಡ್ ದೈಜಿವರ್ಲ್ಡ್ ಹಾಗೂ ಎಟಿಸಿ ಆನ್ಲೈನ್ನ ಜಂಟಿ ಯೋಜನೆಯಾಗಿದೆ.
ಹಾಗೆಯೇ ದೈಜಿವರ್ಲ್ಡ್.ಕಾಮ್ ವೆಬ್ ಪೋರ್ಟಲ್ನ ತಾಂತ್ರಿಕ ರಚನೆಯ ನವೀಕರಣ ಮಾಡಲಾಗುತ್ತದೆ ಎಂದು ಕೂಡಾ ನಾವು ಈ ಸಂದರ್ಭದಲ್ಲೇ ಘೋಷಿಸಲು ಬಯಸುತ್ತೇವೆ. ಸಂದರ್ಶ ಸ್ನೇಹಿ ಮೊಬೈಲ್ ಅಪ್ಲಿಕೇಶನ್, ವೆಬ್ಸೈಟ್ನ ಮೊಬೈಲ್ ಆವೃತ್ತಿಯಲ್ಲಿ ಮುಂಬರುವ ದಿನದಲ್ಲಿ ತ್ವರಿತ ಬ್ರೌಸಿಂಗ್ ಅನುಭವ ನೀವು ಹೊಂದಲು ಸಾಧ್ಯವಾಗುತ್ತದೆ. ಆದರೆ ಈ ನವೀಕರಣದ ಸಂದರ್ಭ ಸೇವೆಯ ಅಡಚಣೆ ಉಂಟಾಗುವ ಸಾಧ್ಯತೆಯಿದೆ.
ಲಾಕ್ಡೌನ್ ಸಂದರ್ಭದಲ್ಲೂ ಬತ್ತದ ಸಾಮಾಜಿಕ ಕಾಳಜಿ
ಕಳೆದ 20 ವರ್ಷಗಳಲ್ಲಿ ದೈಜಿವರ್ಲ್ಡ್ಗೆ ಬಂದ ಮನವಿಯ ಆಧಾರದಲ್ಲಿ ಈವರೆಗೆ 23 ಕೋಟಿ ರೂ.ಗಳ ನೆರವನ್ನು ದಾನಿಗಳಿಂದ ಫಲಾನುಭವಿಗಳಿಗೆ ಸಹಾಯ ಮಾಡಲು ದೈಜಿವರ್ಲ್ಡ್ ಮುಖೇನ ಸಾಧ್ಯವಾಗಿದೆ ಎಂದು ತಿಳಿಸಲು ನಾವು ಸಂತೋಷಪಡುತ್ತೇವೆ. ವೈದ್ಯಕೀಯ, ಶಿಕ್ಷಣ, ವಸತಿ ಮತ್ತು ಇತರ ಅಗತ್ಯಗಳಂತಹ ಉದಾತ್ತ ಕಾರಣಗಳಿಗಾಗಿ ನಮ್ಮ ಓದುಗರಿಂದ ಸುಮಾರು ಒಂದು ಸಾವಿರಕ್ಕೂ ಹೆಚ್ಚು ವ್ಯಕ್ತಿಗಳು ಹಾಗೂ ಕುಟುಂಬಕ್ಕೆ ನೇರ ಸಹಾಯ ಮಾಡಲು ಸಾಧ್ಯವಾಗಿದೆ. ನಮ್ಮ ಈ ಸೇವಾ ಕಾರ್ಯ ಮುಂದುವರಿದಿದ್ದು ಸಹಾಯ ಪಡೆಯಲು ಅರ್ಹರಾದವರಿಗೆ ನಮ್ಮಿಂದಾದ ಸಹಾಯ ಮಾಡಲು ಪ್ರಯತ್ನಿಸುತ್ತೇವೆ.
ಹಠಾತ್ ಲಾಕ್ಡೌನ್ ಸಂದರ್ಭದಲ್ಲಿ ಸಾವಿರಾರು ಜನರು ಆಹಾರ ಮತ್ತು ಔಷಧಿ ಇಲ್ಲದೆ ತೊಂದರೆಗೊಳಗಾಗಿದ್ದು ಈ ವೇಳೆ ದೈಜಿವರ್ಲ್ಡ್ ಟಿವಿ ಚಾನೆಲ್ ಮೂಲಕ ಕರಾವಳಿಯ ನಿರ್ಗತಿಕ ಜನರೆಡೆ ಸಹಾಯಹಸ್ತ ಚಾಚಲಾಗಿದೆ. ಈ ಸಂದರ್ಭದಲ್ಲಿ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು. 6,000 ಕ್ಕೂ ಹೆಚ್ಚು ಕುಟುಂಬಗಳಿಗೆ ದಿನಸಿ, ಆಹಾರ, ಔಷಧಿ ಹಾಗೂ ಖಾತೆಗೆ ನಗದು ವರ್ಗಾಯಿಸುವ ಮೂಲಕ ಸಮಯೋಚಿತ ಸಹಾಯವನ್ನು ಮಾಡಲಾಗಿದೆ. ''ನಾವು ನಿಮ್ಮೊಂದಿಗೆ'' ಶೀರ್ಷಿಕೆಯಡಿಯಲ್ಲಿ ನಾವು ಪ್ರಾರಂಭಿಸಿದ ಅಭಿಯಾನವನ್ನು ನಾಗರಿಕರು, ಸರ್ಕಾರಿ ಇಲಾಖೆಗಳು ಮತ್ತು ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಶ್ಲಾಘಿಸಿದ್ದಾರೆ. ಈ ಸಂಕಷ್ಟದ ಸಮಯದಲ್ಲಿ ತೊಂದರೆಗೆ ಒಳಗಾಗಿದ್ದವರನ್ನು ತಲುಪಲು ನಮ್ಮೊಂದಿಗೆ ಕೈಜೋಡಿಸಿದ ಪ್ರತಿಯೊಬ್ಬರಿಗೂ ಇಂದು ನಾವು ಧನ್ಯವಾದಗಳನ್ನು ಅರ್ಪಿಸುತ್ತೇವೆ.
ಮುಂದಿನ ಹಂತಕ್ಕೆ ಪ್ರವೇಶಿಸಲಿದೆ ದೈಜಿವರ್ಲ್ಡ್ ಟಿವಿ ಚಾನೆಲ್
2014 ರಲ್ಲಿ ಪ್ರಾರಂಭವಾದ ದೈಜಿವರ್ಲ್ಡ್ ಟಿವಿ ಈಗ ಮಾಧ್ಯಮ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ನಮ್ಮ ಟಿವಿ ಚಾನೆಲ್ ಈಗ ಜಿಯೋ (JIO) ಪ್ಲಾಟ್ಫಾರ್ಮ್ನಲ್ಲಿ ಲಭ್ಯವಿದೆ. ನಮ್ಮ ವ್ಯಾಪ್ತಿಯು ಕೇರಳ, ಸಕಲೇಶಪುರ, ಉತ್ತರ ಕರಾವಳಿ ಮತ್ತು ಇತರ ಸ್ಥಳಗಳಿಗೆ ವಿಸ್ತರಿಸಿದೆ.
ಶೀಘ್ರದಲ್ಲೇ, ನಮ್ಮ ಚಾನಲ್ ಬೆಂಗಳೂರು ಮತ್ತು ಮುಂಬೈನಲ್ಲಿ ಸೆಟ್-ಟಾಪ್ ಬಾಕ್ಸ್ ಮೂಲಕ ಲಭ್ಯವಿರುತ್ತದೆ. ನಮ್ಮ ಇತರ ವೀಕ್ಷಕರು ಪ್ರಸ್ತುತ ಮೊಬೈಲ್ ಅಪ್ಲಿಕೇಶನ್, ಯೂಟ್ಯೂಬ್ ಲೈವ್, ಫೇಸ್ಬುಕ್ ಲೈವ್ ಮತ್ತು ಜೆಐಒ ಪ್ಲಾಟ್ಫಾರ್ಮ್ಗಳ ಮೂಲಕ ಲೈವ್ ಕಾರ್ಯಕ್ರಮಗಳನ್ನು ವೀಕ್ಷಿಸಬಹುದಾಗಿದೆ.
ನಮ್ಮ ಮುಂದಿರುವ ಸವಾಲುಗಳು:
ನಮಗೆಲ್ಲರಿಗೂ ತಿಳಿದಿರುವಂತೆ, ಸಾಂಕ್ರಾಮಿಕ ರೋಗದಿಂದಾಗಿ ಎಲ್ಲಾ ಸಂಸ್ಥೆಗಳು ಸವಾಲಿನ ಸಮಯಗಳನ್ನು ಎದುರಿಸುತ್ತಿದೆ. ದೈಜಿವರ್ಲ್ಡ್ನ ಕಾರ್ಯಕ್ರಮಗಳನ್ನು ಸ್ಪಷ್ಟ ಮತ್ತು ಸಕಾರಾತ್ಮಕ ದೃಷ್ಟಿಕೋನದಿಂದ ಮುಂದುವರಿಯಲು ನಾವು ನಿರ್ಧರಿಸಿದ್ದೇವೆ. ಸುದ್ದಿ ಮತ್ತು ಮನರಂಜನೆ ಒದಗಿಸುವುದರ ಹೊರತಾಗಿ, ನಮ್ಮ ಮಾಧ್ಯಮವನ್ನು ಪರಿಣಾಮಕಾರಿಯಾಗಿ ಬಳಸುವುದರ ಮೂಲಕ ಅಗತ್ಯವಿರುವವರನ್ನು ತಲುಪುವುದು ನಮ್ಮ ಧ್ಯೇಯವಾಗಿದೆ. ಸಾಮಾಜಿಕ ಸಮಸ್ಯೆಗಳ ವಿರುದ್ದ ಮತ್ತು ನ್ಯಾಯಕ್ಕಾಗಿ ಹೋರಾಡುವುದು ನಮ್ಮ ಧ್ಯೇಯದ ಭಾಗವಾಗಿದೆ. ನಮ್ಮ ಈ ಹಾದಿಯಲ್ಲಿ ಸಕಾರಾತ್ಮಕವಾಗಿ ಸಹಕರಿಸಿದ ಆಡಳಿತಕ್ಕೆ ಮತ್ತು ಸಂಬಂಧಪಟ್ಟ ಇಲಾಖೆಗಳಿಗೆ ಧನ್ಯವಾದಗಳು. ನಾವು ನಿಮ್ಮೆಲ್ಲರ ಬೆಂಬಲ ಹೀಗೆ ಮುಂದುವರಿಯಲಿ ಎಂದು ಬಯಸುತ್ತೇವೆ. ಹಾಗೆಯೇ ನಿಮ್ಮ ಬೆಂಬಲದೊಂದಿಗೆ, ನಮ್ಮ ಗುರಿಯನ್ನು ಸಾಧಿಸಲು ನಾವು ಆಶಿಸುತ್ತೇವೆ.
ಕಳೆದ 20 ವರ್ಷಗಳ ಪಯಣದಲ್ಲಿ ನಮ್ಮ ಸಂಸ್ಥೆಯು ಈ ಯಶಸ್ಸನ್ನು ಸಾಧಿಸಲು ನಮ್ಮ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ, ನಮ್ಮ ಶಕ್ತಿ ಮತ್ತು ಬೆನ್ನೆಲುಬಾಗಿರುವ ತಂಡದ ಸದಸ್ಯರ ಸಮರ್ಪಣಾ ಮನೋಭಾವನೆಯೇ ಕಾರಣ.
2019 ರ ನವೆಂಬರ್ 20 ರಂದು ಹೃದಯಾಘಾತದಿಂದ ನಿಧನರಾದ ನಮ್ಮ ನಿರ್ದೇಶಕ ವಿಕ್ಟರ್ ಡಿಸೋಜಾ (54), ಕಳೆದ ವರ್ಷ ಮಾರ್ಚ್ 1 ರಂದು ಕ್ಯಾನ್ಸರ್ನಿಂದ ನಿಧನರಾದ ನಮ್ಮ ಸಂಪಾದಕೀಯ ಮುಖ್ಯಸ್ಥ ರಿಚೀ ಜಾನ್ ಪೈಸ್ (51) ಅವರನ್ನು ಮತ್ತು 2020 ರ ಮೇ 2 ರಂದು ಕ್ಯಾನ್ಸರ್ಗೆ ಬಲಿಯಾದ ದೈಜಿವರ್ಲ್ಡ್ ಮುದ್ರಣ ಆವೃತ್ತಿಯ ಆನಾ ಮಸ್ಕರೇನ್ಹಾಸ್ (55) ನಾವು ದುಃಖದಿಂದ ನೆನಪಿಸಿಕೊಳ್ಳುತ್ತೇವೆ. ಅವರ ಆತ್ಮಕ್ಕೆ ಶಾಂತಿ ಕೋರುತ್ತೇವೆ.
ಈ ಹೊಸ ವರ್ಷವು ಎಲ್ಲರಿಗೂ ಸಂತೋಷ, ಶಾಂತಿ ಮತ್ತು ಸಮೃದ್ಧಿಯನ್ನು ತರಲಿ ಎಂಬುದು ನಮ್ಮ ಹಾರೈಕೆ.
ನಿಮ್ಮ ಪ್ರತಿಕ್ರಿಯೆ, ಸಲಹೆ ಮತ್ತು ಇತರ ಮಾಹಿತಿಗಾಗಿ ನೀವು ನಮ್ಮ ಸಹಾಯವಾಣಿ ವಾಟ್ಸಾಪ್ ಸಂಖ್ಯೆ ಮೂಲಕ ನಮ್ಮನ್ನು ಸಂಪರ್ಕಿಸಬಹುದು: +91 82174 66588