ವಿಜಯಪುರ, ಜ.14 (DaijiworldNews/HR) : ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ನನ್ನ ಬೆಂಬಲ ಕೋರಿದ್ದ ಮೂವರು ಇದೀಗ ಸಿ.ಡಿ ತೋರಿಸಿ ಬ್ಲ್ಯಾಕ್ ಮೇಲ್ ಮಾಡಿ, ಹಣ ನೀಡಿ ಸಚಿವ ಸ್ಥಾನ ಪಡೆದುಕೊಂಡು ಸಂಪುಟ ಸೇರಿದ್ದಾರೆ ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪ ಮಾಡಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಹಣ ಕೊಟ್ಟವರಿಗೆ ಹಾಗೂ ಬ್ಲ್ಯಾಕ್ ಮೇಲ್ ಮಾಡಿದವರಿಗೆ ಸಚಿವ ಸ್ಥಾನ ಸಿಕ್ಕಿದೆ. ಇನ್ನು ಕೆಲವರು ಸಿಡಿ ತೋರಿಸಿ ಯಡಿಯೂರಪ್ಪ ಅವರನ್ನು ಹೆದರಿಸಿ ಸಚಿವರಾಗಿದ್ದು, ಜೊತೆಗೆ ಇನ್ನು ಕೆಲವರು ಹಣ ನೀಡಿ ಸಚಿವರಾಗಿದ್ದಾರೆ" ಎಂದರು.
ಇನ್ನು "ಇದೇ ಮೂರು ಜನ ಈ ಹಿಂದೆ ನನ್ನು ಭೇಟಿಯಗಿ, ನಾವೆಲ್ಲರೂ ಒಗ್ಗೂಡಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸೋಣ, ನಮಗೆ ಬೆಂಬಲ ನೀಡಿ ಎಂದು ಹೇಳಿದ್ದರು, ಅವರ ಮಾತು ಕೇಳಿ ನನಗೆ ಆಶ್ಚರ್ಯವಾಗಿತ್ತು" ಎಂದರು.
ಆದರೆ ಯತ್ನಾಳ ಅವರು ಬ್ಲ್ಯಾಕ್ ಮೇಲ್ ಮಾಡಿದ ಮೂವರಲ್ಲಿ ಯಾರೊಬ್ಬರ ಹೆಸರನ್ನು ಕೂಡ ಬಹಿರಂಗಪಡಿಸಿಲ್ಲ.
ಯಡಿಯೂರಪ್ಪ ಅವರು ವೀರಶೈವ-ಲಿಂಗಾಯತ ಸಮಾಜದ ಅವಮಾನಮಾಡಿದ್ದಾರೆ, ಮುಖ್ಯಮಂತ್ರಿಗಳಿಗೆ ನೈತಿಕತೆ ಇದ್ದರೆ ರಾಜೀನಾಮೆ ನೀಡಿ ಹೊರಬರಲಿ ಎಂದು ಸವಾಲು ಹಾಕಿದ್ದಾರೆ.
ಇನ್ನು "ವೀರಶೈವ ಮತ್ತು ಲಿಂಗಾಯತ ಮಠಗಳಿಗೆ ಹಣ ಕೊಟ್ಟಿರುವ ಯಡಿಯೂರಪ್ಪ, ಅಧಿಕಾರದಿಂದ ತಮ್ಮನ್ನು ಕೆಳಗೆ ಇಳಿಸಿದರೆ ತಮ್ಮಿಂದ ಹಣ ಪಡೆದ ಮಠಗಳು ಕೇಂದ್ರದ ವಿರುದ್ಧ ಬಂಡೇಳುವಂತೆ ಯೋಜನೆ ರೂಪಿಸಿದ್ದಾರೆ" ಎಂದು ಆರೋಪಿಸಿದ್ದಾರೆ.