ನವದೆಹಲಿ, ಜ. 14 (DaijiworldNews/MB) : ಸ್ವದೇಶಿ ನಿರ್ಮಿತ 83 ತೇಜಸ್ ಎಂಕೆ 1ಎ ಲಘು ಯುದ್ಧವಿಮಾನವನ್ನು ಭಾರತೀಯ ವಾಯುಪಡೆಗಾಗಿ (ಐಎಎಫ್) ಖರೀದಿಸುವ 47 ಸಾವಿರ ಕೋಟಿ ಒಪ್ಪಂದಕ್ಕೆ ಕೇಂದ್ರ ಸಚಿವ ಸಂಪುಟದ ಭದ್ರತಾ ಕೇಂದ್ರ ಸಚಿವ ಸಂಪುಟದ ಭದ್ರತೆಯ ಬುಧವಾರ ಸಮ್ಮತಿ ಸೂಚಿಸಿದೆ. ಈ ಮೂಲಕ ಸ್ವದೇಶಿ ವಿಮಾನ ಉದ್ಯಮಕ್ಕೆ ಇನ್ನಷ್ಟು ಪ್ರೋತ್ಸಾಹ ನೀಡಿದಂತಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ರಕ್ಷಣಾ ಸಚಿವಾಲಯದ ವಕ್ತಾರರು, ''ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ 73 ಯುದ್ಧ ವಿಮಾನಗಳನ್ನು ವಾಯುಪಡೆಗಾಗಿ, ತರಬೇತಿಗಾಗಿ ಅಂತಹುದೇ 10 ಯುದ್ಧ ವಿಮಾನಗಳನ್ನು5,696 ಕೋಟಿ ವೆಚ್ಚದಲ್ಲಿ ಖರೀದಿಸಲು, ದುರಸ್ತಿ ಡಿಪೊಗಳ ನಿರ್ಮಾಣಕ್ಕೆ 1,202 ಕೋಟಿ ವ್ಯಯಿಸಲು ಒಪ್ಪಿಗೆ ನೀಡಲಾಗಿದೆ'' ಎಂದು ತಿಳಿಸಿದ್ದಾರೆ.
ಲಘು ಯುದ್ಧ ವಿಮಾನ ತೇಜಸ್ ಮಾರ್ಕ್ 1ಎ, ಸ್ವದೇಶಿ ನಿರ್ಮಿತ, ಅತ್ಯಾಧುನಿಕವಾದ ನಾಲ್ಕನೇ ತಲೆಮಾರಿನ ಯುದ್ಧ ವಿಮಾನವಾಗಿದ್ದು ವಿದ್ಯುನ್ಮಾನ ಸಕ್ರಿಯ ರೇಡಾರ್ ವ್ಯವಸ್ಥೆ ಈ ಯುದ್ಧ ವಿಮಾನದ ಪ್ರಮುಖ ವೈಶಿಷ್ಟ್ಯವಾಗಿದೆ. ಆಗಸದಿಂದ ಆಗಸಕ್ಕೆ, ಅಲ್ಪದೂರ ಮತ್ತು ಮಧ್ಯಮ ದೂರದ ಗುರಿಗಳಿಗೆ ದಾಳಿ ಮಾಡಬಲ್ಲ ಕ್ಷಿಪಣಿ ವ್ಯವಸ್ಥೆ ಇದರಲ್ಲಿದೆ. ಆಗಸದಲ್ಲಿಯೇ ಇಂಧನ ತುಂಬಿಸುವ ವ್ಯವಸ್ಥೆಯೂ ಕೂಡಾ ಇದೆ.
ಈ ಹಿಂದೆ ಬೆಂಗಳೂರಿನ ಹಿಂದೂಸ್ಥಾನ ಎರೊನಾಟಿಕಲ್ ಲಿ.ನಿಂದ (ಎಚ್ಎಎಲ್) ಭಾರತೀಯ ವಾಯುಪಡೆಯು 8,802 ಕೋಟಿ ವೆಚ್ಚದಲ್ಲಿ 40 ತೇಜಸ್ ಯುದ್ಧ ವಿಮಾನಗಳನ್ನು ಖರೀದಿಸಿತ್ತು. ಆದರೆ ಈಗ ಮಾರ್ಕ್ 1ಎ ಆವೃತ್ತಿಯಲ್ಲಿ 43 ಸುಧಾರಣೆಗಳನ್ನು ಮಾಡಲಾಗಿದೆ.