ಬೆಂಗಳೂರು, ಜ. 14 (DaijiworldNews/MB) : ತಮಗೆ ಸಚಿವ ಸ್ಥಾನ ದಕ್ಕದೇ ನಿರಾಸೆಗೊಂಡ ಮುನಿರತ್ನ ಸೇರಿ ಕೆಲವು ಅತೃಪ್ತ ಶಾಸಕರು ಪಕ್ಷದ ಉಸ್ತುವಾರಿ ಅರುಣ್ಸಿಂಗ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ಎಚ್.ನಾಗೇಶ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಕುಮಾರಕೃಪಾದಲ್ಲಿ ಅರುಣ್ ಸಿಂಗ್ರನ್ನು ಭೇಟಿ ಮಾಡಿದರು. ಇನ್ನು ಮುನಿರತ್ನ ಸೇರಿ ಕೆಲವು ಅತೃಪ್ತ ಶಾಸಕರು ಅರುಣ್ ಸಿಂಗ್ ಅವರನ್ನು ಭೇಟಿಯಾಗಿ ತಮ್ಮ ಅಸಮಾಧಾನ ತಿಳಿಸಿದ್ದಾರೆ ಎನ್ನಲಾಗಿದೆ.
ಇನ್ನು ಸಚಿವ ಸ್ಥಾನ ಪಡೆದ ಮುರುಗೇಶ ನಿರಾಣಿ ಅವರು ಕೂಡಾ ಅರುಣ್ ಸಿಂಗ್ ಅವರನ್ನು ಭೇಟಿ ಮಾಡಿ ಧನ್ಯವಾದ ತಿಳಿಸಿದರು. ಈ ವೇಳೆ ಉಪಮುಖ್ಯಮಂತ್ರಿ ಡಾ. ಸಿ. ಎನ್. ಅಶ್ವತ್ಥನಾರಾಯಣ ಮತ್ತು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರೂ ಕೂಡಾ ಜೊತೆಗಿದ್ದರು ಎಂದು ವರದಿ ತಿಳಿಸಿದೆ.
ಏತನ್ಮಧ್ಯೆ ಸುಮಾರು 35 ನಿಮಿಷಗಳ ಕಾಲ ಆರೋಗ್ಯ ಸಚಿವ ಸುಧಾಕರ್ ಜತೆ ಅರುಣ್ ಸಿಂಗ್ ಅವರು ಮಾತುಕತೆ ನಡೆಸಿದರು. ಈ ಸಂದರ್ಭ ಪಕ್ಷದಲ್ಲಿ ಕಂಡು ಬಂದಿರುವ ಅಸಮಾಧಾನದ ಬಗ್ಗೆ ಮಾಹಿತಿ ಪಡೆದರು ಎಂದು ತಿಳಿದು ಬಂದಿದೆ.