ಪಾಟ್ನಾ, ಜ. 13 (DaijiworldNews/MB) : 15 ವರ್ಷದ ಕಿವುಡ ಹಾಗೂ ಮೂಕ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ದುರುಳರು ಆಕೆಯ ಕಣ್ಣಿಗೆ ಚೂಪಾದ ವಸ್ತುವಿಂದ ಹಾನಿಗೈದ ಘಟನೆ ಬಿಹಾರದ ಮಧುಬನಿ ಜಿಲ್ಲೆಯ ಕೌವಾಹ ಬರ್ಹಿ ಗ್ರಾಮದಲ್ಲಿ ನಡೆದಿದೆ.
ಆಡುಗಳನ್ನು ಮೇಯಿಸಲು ಹೋಗುತ್ತಿದ್ದ ಬಾಲಕಿಯನ್ನು ತಡೆದ ಅದೇ ಗ್ರಾಮದ ಆರೋಪಿಗಳು ಆಕೆಯ ಮೇಲೆ ಅತ್ಯಾಚಾರಗೈದು ಆಕೆ ತಮ್ಮನ್ನು ಗುರುತಿಸಬಾರದು ಎಂದು ಕಣ್ಣಿಗೆ ಹಾನಿ ಮಾಡಿದ್ದಾರೆ ಎಂದು ವರದಿ ತಿಳಿಸಿದೆ.
ಆಕೆಯೊಂದಿಗಿದ್ದ ಮಕ್ಕಳಲ್ಲಿ ಓರ್ವ ಮಗು ಈ ಬಗ್ಗೆ ಆಕೆಯ ಕುಟುಂಬಕ್ಕೆ ತಿಳಿಸಿದ್ದು ಕೂಡಲೇ ಕುಟುಂಬಸ್ಥರು ಆ ಮಗು ತಿಳಿಸಿದ ಸ್ಥಳಕ್ಕೆ ತೆರಳಿದಾಗ ಆಕೆ ಪ್ರಜ್ಞಾಹೀನಳಾಗಿ ಬಿದ್ದಿದ್ದಳು. ಬಾಲಕಿಯನ್ನು ಆರಂಭದಲ್ಲಿ ಹತ್ತಿರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿತ್ತು. ನಂತರ ಮಧುಬನಿಯ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ವೈದ್ಯರು, ''ಬಾಲಕಿಯ ಎರಡೂ ಕಣ್ಣುಗಳು ಹಾನಿಯಾಗಿದೆ. ಸಂಪೂರ್ಣವಾಗಿ ದೃಷ್ಟಿ ಕಳೆದುಕೊಂಡಿದ್ದಾಳೆಯೇ ಎಂದು ಇನ್ನಷ್ಟೇ ತಿಳಿದು ಬರಬೇಕಿದೆ. ಆಕೆಯ ಸ್ಥಿತಿ ಚಿಂತಾಜನಕವಾಗಿದೆ'' ಎಂದು ವೈದ್ಯರು ತಿಳಿಸಿದ್ದಾರೆ.