ಮೈಸೂರು, ಜ.13 (DaijiworldNews/PY): "ದನದ ಮಾಂಸ ಸೇವಿಸಿದರೆ ಆರೋಗ್ಯ ಚೆನ್ನಾಗಿರುತ್ತದೆ ಎಂದು ಶ್ಲೋಕದಲ್ಲೇ ಹೇಳಿದ್ದಾರೆ. ಆದರೆ, ದನದ ಮಾಂಸ ನಾನು ತಿಂದಿಲ್ಲ" ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಮೈಸೂರಿನಲ್ಲಿ ಮಾತನಾಡಿದ ಅವರು, ದನದ ಮಾಂಸ ತಿನ್ನುವ ಬಗ್ಗೆ ಶ್ಲೋಕವಿದೆ. ಆದರೆ, ಆ ಶ್ಲೋಕ ನನಗೆ ನೆನಪಾಗುತ್ತಿಲ್ಲ. ಆಮೇಲೆ ನೆನಪು ಮಾಡಿಕೊಂಡು ತಿಳಿಸುತ್ತೇನೆ. ಸಂಸ್ಕೃತ ತಿಳಿದಿರುವವರೇ ಶ್ಲೋಕ ಬರೆದಿರುತ್ತಾರೆ. ಹಾಗಾದರೆ, ಶ್ಲೋಕದಲ್ಲಿ ತಪ್ಪು ಇದೆಯಾ?" ಎಂದು ಕೇಳಿದರು.
"ಒಳ್ಳೆಯ ದನದ ಮಾಂಸ ತಿಂದರೆ ಆರೋಗ್ಯ ಕೂಡಾ ಚೆನ್ನಾಗಿ ಇರುತ್ತದೆ ಎಂದು ಆ ಶ್ಲೋಕದಲ್ಲಿದೆ. ಆದರೆ, ಈಗ ನನಗೆ ಆ ಶ್ಲೋಕ ನೆನಪಾಗುತ್ತಿಲ್ಲ. ಪುನಃ ಮೈಸೂರಿಗೆ ಬಂದ ಸಂದರ್ಭ ನಾನು ಆ ಶ್ಲೋಕವನ್ನು ಹೇಳುತ್ತೇನೆ. ಈಗ ಆ ಶ್ಲೋಕವನ್ನು ತಿಳಿಸಿದರೆ ವಿವಾದವುಂಟು ಮಾಡುತ್ತಾರೆ. ಹಾಗಾಗಿ ಶ್ಲೋಕವನ್ನು ಸರಿಯಾಗಿ ತಿಳಿಸುತ್ತೇನೆ" ಎಂದು ಹೇಳಿದರು.
"ಈವರೆಗೆ ನಾನು ಗೋಮಾಂಸ ಸೇವನೆ ಮಾಡಿಲ್ಲ. ತಿನ್ನಬೇಕು ಎಂದು ಅನಿಸಿದರೆ ನಾನು ತಿನ್ನುತ್ತೇನೆ. ಆದರೆ, ಅದನ್ನು ಕೇಳಲು ಇವರು ಯಾರು?. ಆಹಾರ ನನ್ನ ಹಕ್ಕು. ಅದನ್ನು ಪ್ರಶ್ನೆ ಮಾಡೋಕೆ ಇವರ್ಯಾರು?" ಎಂದು ಕೇಳಿದರು.
"ನಾನು ಕೋಳಿ, ಕುರಿ ಹಾಗೂ ಆಡಿನ ಮಾಂಸ ಮಾತ್ರ ತಿಂದಿದ್ದೇನೆ. ಆದರೆ, ನಮ್ಮ ಆಹಾರದ ಪದ್ದತಿಯನ್ನು ಪ್ರಶ್ನೆ ಮಾಡುವ ಹಕ್ಕು ಯಾರಿಗೂ ಕೂಡಾ ಇಲ್ಲ" ಎಂದರು.
"ಯಡಿಯೂರಪ್ಪ ಗೋಮಾಂಸ ಸೇವನೆ ಮಾಡುವುದೇ ಸಾಧನೆ ಎಂದು ಹೇಳಿದ್ದಾನೆ. ಆದರೆ, ನಾನು ಅವನ ರೀತಿ ಸೊಪ್ಪು ತಿನ್ನಬೇಕಾ?. ಸೊಪ್ಪು ಬೇಕು ಅಂದರೆ ಸೊಪ್ಪು, ಮಾಂಸ ಬೇಕು ಎಂದರೆ ನಾನು ಮಾಂಸ ತಿನ್ನುತ್ತೇನೆ ಎಂದರು.
"ವಿಶ್ವದಲ್ಲಿ ಮಾಂಸಾಹಾರಿಗಳ ಸಂಖ್ಯೆ ಹೆಚ್ಚಿದೆ. ಚೀನಾದಲ್ಲಿ ನಾಲ್ಕು ಕಾಲಿನ ಮಂಚವೊಂದನ್ನು ಬಿಟ್ಟು ಬೇರೆಲ್ಲವನ್ನೂ ಸೇವಿಸುತ್ತಾರೆ ಇದು ನಿಮಗೆ ತಿಳಿದಿದೆಯಾ?. ಇಂಗ್ಲೆಂಡ್, ಅಮೇರಿಕಾ, ಬ್ರಿಟನ್ ಸೇರಿದಂತೆ ಬೇರೆ ದೇಶದಲ್ಲಿರುವವರು ದನದ ಮಾಂಸ ತಿನ್ನುತ್ತಾರೆ. ಹಾಗಾದರೆ ಅವರೆಲ್ಲಾ ಪ್ರಾಣಿಗಳಾ?. ಬೇರೆಯವರಿಗೆ ಏನು ಇಷ್ಟ ಇದೆಯೋ ಅದನ್ನು ತಿನ್ನಲು ಬಿಡಿ" ಎಂದು ಸಿಎಂ ಬಿಎಸ್ವೈ ಅವರ ವಿರುದ್ದ ಏಕವಚನದಲ್ಲಿ ವಾಗ್ದಾಳಿ ನಡೆಸಿದರು.