ಮೈಸೂರು, ಜ. 13 (DaijiworldNews/MB) : ''ಏಳು ಜನರು ಸೇರಿದರೂ ಕೂಡಾ ಈ ಸರ್ಕಾರ ಟೇಕ್ ಆಫ್ ಆಗಲ್ಲ'' ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ''ನನಗಿದ್ದ ಮಾಹಿತಿ ಪ್ರಕಾರ ಬಿ ಎಸ್ ಯಡಿಯೂರಪ್ಪ ಅವರಿಗೆ ರಾಜೀನಾಮೆ ನೀಡುವಂತೆ ಬಿಜೆಪಿ ಹೈಕಮಾಂಡ್ ಸೂಚನೆ ನೀಡಿತ್ತು. ಆದರೆ ಈಗ ಬಜೆಟ್ ಮಂಡನೆಗಾಗಿ ಅವಕಾಶ ನೀಡಿರಬಹುದು. ಸಂಪುಟ ವಿಸ್ತರಣೆಗೆ ಅವಕಾಶ ನೀಡಿದ ಕಾರಣ ಇನ್ನೂ ಸ್ವಲ್ಪ ದಿನ ಯಡಿಯೂರಪ್ಪ ಮುಖ್ಯಮಂತ್ರಿಯಾಗಿರಲಿದ್ದಾರೆ'' ಎಂದರು.
''ಏಳು ಜನರು ಸೇರಿದರೂ ಕೂಡಾ ಈ ಸರ್ಕಾರ ಟೇಕ್ ಆಫ್ ಆಗಲ್ಲ. ಸಚಿವ ಸಂಪುಟ ಭರ್ತಿಯಾದರೆ ಸರ್ಕಾರ ಪರಿಪೂರ್ಣ ಎಂದಲ್ಲ. ಸಂಪುಟ ವಿಸ್ತರಣೆ ವಿಚಾರದಲ್ಲಿ ಪ್ರಾದೇಶಿಕ ಅಸಮತೋಲನವಿದೆ. ಬಿಜೆಪಿಯವರಿಗೆಯೇ ಸಮತೋಲನದ ಬಗ್ಗೆ ನಂಬಿಕೆಯಿಲ್ಲ. ಅವರಿಗೆ ಸಮಾನತೆ ಎಂಬುದು ಬೇಕಾಗಿಲ್ಲ. ಸಂವಿಧಾನ ವಿರೋಧಿಗಳಾದ ಅವರಲ್ಲಿ ಸಾಮಾಜಿಕ ನ್ಯಾಯವಾದರೂ ಹೇಗೆ ಬಂದೀತು'' ಎಂದು ದೂರಿದರು.
''ಈಗಾಗಲೇ ಈ ಸರ್ಕಾರ ದುಸ್ಥಿತಿಯಲ್ಲಿದ್ದು ಸಂಪುಟ ವಿಸ್ತರಣೆಯ ಅಸಮಾಧಾನದ ವಿಚಾರದಲ್ಲಿ ಅಧೋಗತಿಗೆ ಹೋಗಲಿದೆ'' ಎಂದರು.