ಹೊಸಪೇಟೆ, ಜ.13 (DaijiworldNews/PY): "ನನ್ನನ್ನು ಮಂತ್ರಿ ಸ್ಥಾನದಿಂದ ಕೈ ಬಿಡುವ ವಿಚಾರದ ಬಗ್ಗೆ ಸಿಎಂ ಆಗಲಿ ಪಕ್ಷದ ಮುಖಂಡರಾಗಲಿ ನನಗೆ ಕರೆ ಮಾಡಿಲ್ಲ. ಅಲ್ಲದೇ ಈ ವಿಚಾರದ ಬಗ್ಗೆ ನನಗೆ ತಿಳಿದಿಲ್ಲ. ಮಾಧ್ಯಮಗಳಲ್ಲಿ ಈ ಬಗ್ಗೆ ಗಮನಿಸಿದ್ದೇನೆ" ಎಂದು ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್ ಹೇಳಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ನನ್ನನ್ನು ಮಂತ್ರಿ ಮಾಡಿ ಎಂದು ನಾನು ಕೇಳಿಕೊಂಡಿಲ್ಲ. ಆದರೂ, ಕೂಡಾ ನನಗೆ ಮಂತ್ರಿ ಸ್ಥಾನ ನೀಡಿದ್ದಾರೆ. ನಾನೊಬ್ಬ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದು, ಪಕ್ಷದ ಎಲ್ಲಾ ಹಂತಗಳಲ್ಲಿಯೂ ಕೂಡಾ ಕಾರ್ಯ ನಿರ್ವಹಿಸಿದ್ದೇನೆ. ಇನ್ನು ಮುಂದೆಯೂ ಕೂಡಾ ಪಕ್ಷ ಯಾವುದೇ ಜವಾಬ್ದಾರಿ ನೀಡಿದರೂ ಕೂಡಾ ನಿರ್ವಹಿಸಲು ನಾನು ಸಿದ್ದನಾಗಿದ್ದೇನೆ" ಎಂದರು.
"ಇದು ಸಚಿವ ಸಂಪುಟ ವಿಸ್ತರಣೆಯಲ್ಲ, ಪುನರ್ ರಚನೆಯಾಗಿದೆ. ನನ್ನ ಅವಧಿಯಲ್ಲಿ ನಾನು ಗೋಹತ್ಯೆ ಕಾಯ್ದೆ ಅನುಷ್ಠಾನ ಹಾಗೂ ಅನೇಕ ಕೆಲಸ ಮಾಡಿದ್ದೇನೆ. ಈ ಹಿನ್ನೆಲೆ ಸಚಿವ ಸ್ಥಾನದಿಂದ ನನ್ನನ್ನು ಕೈಬಿಡುವುದಿಲ್ಲ ಎನ್ನುವ ವಿಶ್ವಾಸವಿದೆ" ಎಂದು ಹೇಳಿದರು.
"ಜಾನುವಾರು ಕಾಲುಬಾಯಿ ಲಸಿಕೆ ಕಳಪೆ ಎನ್ನುವ ದೂರಿನ ಹಿನ್ನೆಲೆ ತನಿಖೆ ಕೈಗೊಳ್ಳಲು ಆದೇಶಿಸಲಾಗಿದೆ. ವರದಿಯನ್ನು ನೋಡಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುವುದು" ಎಂದು ತಿಳಿಸಿದರು.