ಬೆಂಗಳೂರು, ಜ. 13 (DaijiworldNews/MB) : ''ಪದೇ ಪದೇ ವಿದ್ಯುತ್ ಬೆಲೆ ಏರಿಸಿದರೆ ಜನರ ಜೀವನ ಸಾಗುವುದು ಹೇಗೆ'' ಎಂದು ಕಾಂಗ್ರೆಸ್ ಮುಖಂಡ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.
ಎಸ್ಕಾಂಗಳ ನಷ್ಟದ ಹೊರೆ ಸರಿದೂಗಿಸುವ ನಿಟ್ಟಿನಲ್ಲಿ ಜನವರಿ 1 ರಿಂದ ಮಾರ್ಚ್ 31 ರವರೆಗೆ ಪ್ರತಿ ಯೂನಿಟ್ ವಿದ್ಯುತ್ ದರ 4 ರಿಂದ 8 ಪೈಸೆವರೆಗೆ ಏರಿಕೆ ಮಾಡಲು ಅವಕಾಶ ನೀಡಿ ಕೆಇಆರ್ಸಿ ಆದೇಶ ಹೊರಡಿಸಿರುವ ಬಗ್ಗೆ ಮಾಧ್ಯಮ ಸುದ್ದಿ ಮಾಡಿದೆ.
ಈ ಸುದ್ದಿಯನ್ನು ಉಲ್ಲೇಖಿಸಿ ಟ್ವೀಟ್ ಮಾಡಿರುವ ದಿನೇಶ್ ಗುಂಡೂರಾವ್ ಅವರು, ''ಕೇವಲ 3 ತಿಂಗಳ ಅವಧಿಯಲ್ಲಿ 2 ಬಾರಿ ವಿದ್ಯುತ್ ಬೆಲೆ ಏರಿಕೆಯಾಗಿದೆ. ಈಗ ಮತ್ತೆ ವಿದ್ಯುತ್ ಬೆಲೆ ಏರಿಸಲು ಮುಂದಾಗಿರುವುದು ವಸೂಲಿಯ ಇನ್ನೊಂದು ರೂಪ. ಕೋವಿಡ್ ಸಂಕಷ್ಟದಿಂದ ಜನ ಇನ್ನೂ ಚೇತರಿಸಿಕೊಂಡಿಲ್ಲ. ಜನ ಉದ್ಯೋಗ ನಷ್ಟ,ಆರ್ಥಿಕ ಸಂಕಷ್ಟದಿಂದ ನರಳುತ್ತಿದ್ದಾರೆ. ಹೀಗಿರುವಾಗ ಪದೇ ಪದೇ ವಿದ್ಯುತ್ ಬೆಲೆ ಏರಿಸಿದರೆ ಜನರ ಜೀವನ ಸಾಗುವುದು ಹೇಗೆ?'' ಎಂದು ಪ್ರಶ್ನಿಸಿದ್ದಾರೆ.