ಬೆಂಗಳೂರು, ಜ.13 (DaijiworldNews/PY): ಸಚಿವ ಸಂಪುಟ ವಿಸ್ತರಣೆಯಾಗುತ್ತಿದರೂ ಮಂತ್ರಿಯಾಗುವ ಅವಕಾಶವನ್ನು ಕಳೆದುಕೊಂಡಿರುವ ಎಂಎಲ್ಸಿ ಎಚ್.ವಿಶ್ವನಾಥ್ ಸರ್ಕಾರದ ವಿರುದ್ದ ಕಿಡಿಕಾರಿದ್ದು, "ಸಿದ್ದರಾಮಯ್ಯ ಹಾಗೂ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಕೃತಜ್ಞತೆ ಇಲ್ಲದ ನಾಯಕರು" ಎಂದಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಅವರು, "ಹಲವು ಮಂದಿಯ ವಿರೋಧವಿದ್ದರೂ ಕೂಡಾ ಸಿದ್ದರಾಮಯ್ಯ ಅವರನ್ನು ಸಿಎಂ ಮಾಡಿದ್ದು ನಾವು. ಆದರೆ, ಈ ವಿಚಾರವನ್ನು ಎಲ್ಲೂ ಕೂಡಾ ಹೇಳಿಲ್ಲ. ಅವರೊಬ್ಬ ಕೃತಜ್ಞತೆ ಇಲ್ಲದ ನಾಯಕ. ಇದರಂತೆ ಸಿಎಂ ಬಿ.ಎಸ್.ಯಡಿಯೂರಪ್ಪ ಅವರೂ ಕೂಡಾ ಕೃತಜ್ಞತೆ ಇಲ್ಲದ ನಾಯಕರಾಗಿದ್ದಾರೆ" ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
"ನಾವು ಬಿಜೆಪಿಗೆ ಬರುವ ವಿಚಾರದ ಬಗ್ಗೆ ಯಾವುದೂ ಕೂಡಾ ಗೌಪ್ಯವಾಗಿ ನಡೆದಿಲ್ಲ. ನಮಗೂ ಹಾಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ. ಅಂದಿಗೂ ಯಡಿಯೂರಪ್ಪನವರೇ ನಮಗೆ ಹೈಕಮಾಂಡ್ ಹಾಗೂ ಇಂದಿಗೂ ಕೂಡಾ ಅವರೇ ನಮ್ಮ ಜವಾಬ್ದಾರಿಯಾಗಿದ್ದಾರೆ" ಎಂದು ತಿಳಿಸಿದ್ದಾರೆ.
ಸಿಪಿ ಯೋಗೇಶ್ವರ್ ಅವರಿಗೆ ಸಚಿವ ಸ್ಥಾನ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಯೋಗೇಶ್ವರ್ ನಮ್ಮ ಹಿಂದೆ ಬ್ಯಾಗ್ ಹಿಡಿದುಕೊಂಡು ಓಡಾಡುತ್ತಿದ್ದವನು. ಇದೂ ಒಂದು ಸಾಧನೆಯೇ?" ಎಂದು ವ್ಯಂಗ್ಯವಾಡಿದ್ದಾರೆ.
"ಶಾಸಕ ಸ್ಥಾನಕ್ಕೆ ಮುನಿರತ್ನ ಅವರು ರಾಜೀನಾಮೆ ನೀಡಿದ್ದಾರೆ. ಹಾಗಾಗಿ ಅವರಿಗೆ ಸಚಿವ ಸ್ಥಾನ ನೀಡಲೇಬೇಕು. ಯಾರ ತ್ಯಾಗ ಹಾಗೂ ಭಿಕ್ಷೆಯಿಂದ ನೀವು ಅಧಿಕಾರಕ್ಕೆ ಬಂದಿದ್ದೀರಾ? ಎನ್ನುವ ವಿಚಾರವನ್ನು ಮೊದಲು ಅರ್ಥ ಮಾಡಿಕೊಳ್ಳಿ. ನಿಮ್ಮದು ಬಹುಮತ ಸರ್ಕಾರವಲ್ಲ. ಹಾಗಿರುವಾಗ ಭಿಕ್ಷೆಯಿಂದ ಅಧಿಕಾರ ಹಿಡಿದಿದ್ದೀರಿ ಎನ್ನುವುದನ್ನು ಮರೆಯಬೇಡಿ" ಎಂದು ಕೆಂಡಾಕಾರಿದ್ದಾರೆ.