ದಾವಣಗೆರೆ, ಜ. 13 (DaijiworldNews/MB) : ತನಗೆ ಸಚಿವ ಸ್ಥಾನ ಕೈ ತಪ್ಪಿ ಹೋದ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿರುವ ಶಾಸಕ ರೇಣುಕಾಚಾರ್ಯ, ''ಸಚಿವ ಸ್ಥಾನ ಸಿಗದಿರುವುದಕ್ಕೆ ಕ್ಷೇತ್ರದ ಜನರೇ ಮುಂದೆ ಉತ್ತರ ನೀಡುತ್ತಾರೆ'' ಎಂದು ಹೇಳಿದ್ದಾರೆ.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ''ನನಗೆ ಹೊನ್ನಾಳಿ ಕ್ಷೇತ್ರದ ಜನರೇ ದೇವರು. ಅವರು ನನ್ನ ಕೈ ಹಿಡಿದಿದ್ದಾರೆ. ಮುಂದೆ ಅವರೇ ಉತ್ತರ ನೀಡುತ್ತಾರೆ'' ಎಂದು ಹೇಳಿದ್ದಾರೆ.
''ನಾನು ಒಂದು ಬಾರಿ ಸೋತಿದ್ದೇನೆ. ಆದರೆ ಅದು ನನ್ನ ಅಪರಾಧ, ನನಗೆ ಸಾಮರ್ಥ್ಯ ಇಲ್ಲ, ಅಸಮರ್ಥ ನಾನು'' ಎಂದು ತನ್ನನ್ನು ತಾನು ದೂಷಿಸಿರುವ ಶಾಸಕ ರೇಣುಕಾಚಾರ್ಯ, ''ನಾನು ಸೋತಾರೂ 63 ಸಾವಿರ ಮತ ಪಡೆದಿದ್ದೆ. ಹಾಗೆಯೇ ಗೆದ್ದಾಗ ಹಣ ಖರ್ಚು ಮಾಡದೇ ಗೆದ್ದಿದ್ದೇನೆ. ಲಾಬಿ ಮಾಡುವ ಉದ್ದೇಶ ನನಗೆ ಇದ್ದಿದ್ದರೆ, ಬೆಂಗಳೂರಿನಲ್ಲೇ ಇರಬಹುದಿತ್ತು. ಆದರೆ ನಾನು ನನ್ನ ಕ್ಷೇತ್ರದ ಜನರ ಬಳಿ ಇದ್ದೆ'' ಎಂದು ಹೇಳಿದ್ದಾರೆ.
''ಸಂಪುಟ ವಿಸ್ತರಣೆಯಲ್ಲಿ ಪ್ರಾದೇಶಿಕವಾಗಿ ಅಸಮತೋಲನವಾಗಿದೆ. ನಾನು ಸಚಿವನಾಗಿಲ್ಲ ಎಂದು ನನಗೆ ಬೇಸರವಿದೆ. ಆದರೆ ನನ್ನ ಬೇಸರ ಯಾರ ಹತ್ತಿ ಹೇಳಿಕೊಳ್ಳಲಿ'' ಎಂದು ಅಳಲು ತೋಡಿಕೊಂಡರು.