ಮುಂಬೈ, ಜ. 13 (DaijiworldNews/MB) : ''ಬಾಲಿವುಡ್ ನಟ ಸೋನು ಸೂದ್ ಪದೇ ಪದೇ ಅಪರಾಧ ಎಸಗುವ ಚಾಳಿಯುಳ್ಳವರು'' ಎಂದು ಬಾಂಬೆ ಹೈಕೋರ್ಟ್ಗೆ ಮುಂಬೈ ಮಹಾನಗರ ಪಾಲಿಕೆ ಬಿಎಂಸಿ ಹೇಳಿದೆ.
ತಮ್ಮ ವಿರುದ್ಧ ಬಿಎಂಸಿ ಕಳೆದ ಅಕ್ಟೋಬರ್ನಲ್ಲಿ ನೋಟಿಸ್ ಜಾರಿಗೊಳಿಸಿದ್ದನ್ನು ಹಾಗೂ ಡಿಸೆಂಬರ್ನಲ್ಲಿ ನೋಟಿಸ್ ವಿರುದ್ಧ ಸಲ್ಲಿಸಲಾಗಿದ್ದ ಅರ್ಜಿಯನ್ನು ಸಿವಿಲ್ ನ್ಯಾಯಾಲಯವು ರದ್ದುಪಡಿಸಿದ್ದನ್ನು ಪ್ರಶ್ನಿಸಿ ಸೋನು ಸೂದ್ ಬಾಂಬೆ ಹೈಕೋರ್ಟ್ಗೆ ಮನವಿ ಸಲ್ಲಿಸಿದ್ದರು. ಇದಕ್ಕೆ ಪ್ರತಿಯಾಗಿ ಬಿಎಂಸಿ ಈ ಬಾಂಬೆ ಹೈಕೋರ್ಟ್ಗೆ ಅಫಿಡವಿಟ್ ಸಲ್ಲಿಸಿದೆ.
ಬಿಎಂಸಿ ಅಫಿಡವಿಟ್ ಮೂಲಕ, ''ಈ ಹಿಂದೆ ಎರಡು ಬಾರಿ ಮುಂಬೈ ಉಪನಗರ ಜುಹುದಲ್ಲಿ ತೆರವು ಕಾರ್ಯಾಚರಣೆ ಮಾಡಿದ್ದರೂ ಕೂಡಾ ಸೋನು ಸೂದ್ ಮತ್ತೆ ಅಕ್ರಮ ಮನೆ ನಿರ್ಮಾಣ ಕಾರ್ಯ ನಡೆಸಿದ್ದಾರೆ. ಅವರು ನಿರಂತರವಾಗಿ ಅನಧಿಕೃತ ನಿರ್ಮಾಣ ಕಾಮಗಾರಿ ನಡೆಸುತ್ತೇಲೇ ಇದ್ದಾರೆ'' ಎಂದು ಆರೋಪಿಸಿದೆ.
''ಸೋನು ಸೂದ್ ತಮ್ಮ ಆರು ಅಂತಸ್ತಿನ 'ಶಕ್ತಿ ಸಾಗರ್' ನಿವಾಸದ ಕಟ್ಟಡವನ್ನು ವಾಣಿಜ್ಯ ಹೋಟೆಲ್ ಆಗಿ ಬದಲಾಯಿಸಲು ಯಾವುದೇ ಪರವಾನಿಗೆ ಇಲ್ಲದೆಯೇ ರಚನಾತ್ಮಕ ಬದಲಾವಣೆ ಮಾಡಿದ್ದಾರೆ. ಪರವಾನಿಗೆ ಇಲ್ಲದೆಯೇ ಹೊಟೋಲ್ ನಡೆಸುತ್ತಿದ್ದಾರೆ. ಅವರು ತಮ್ಮ ಅನಧಿಕೃತ ಕಟ್ಟಡದಲ್ಲಿ ವಾಣಿಜ್ಯ ಲಾಭ ಪಡಯಲು ಮುಂದಾಗಿದ್ದಾರೆ. ಅವರು ಸಾಂಪ್ರದಾಯಿಕ ಅಪರಾಧಿ'' ಎಂದು ದೂರಿದೆ.
''2018ರ ಸೆಪ್ಟೆಂಬರ್ನಲ್ಲಿ ಅಕ್ರಮ ನಿರ್ಮಾಣದ ವಿಚಾರದಲ್ಲಿ ಸೋನು ಸೂದ್ ವಿರುದ್ದ ಮೊದಲು ಕ್ರಮ ತೆಗೆದುಕೊಳ್ಳಲಾಗಿತ್ತು. ಆದರೂ ಅವರು ಅಕ್ರಮ ಕಟ್ಟಡ ನಿರ್ಮಾಣ ಮುಂದುವರೆಸಿದ್ದಾರೆ. 2018ರ ನವೆಂಬರ್ 12ರಂದು ಅನಧಿಕೃತ ಕಾಮಗಾರಿಯನ್ನು ತೆರವುಗೊಳಿಸಲಾಗಿತ್ತು'' ಎಂದು ಕೂಡಾ ಈ ಅಫಿಡವಿಟ್ನಲ್ಲಿ ವಿವರಿಸಲಾಗಿದೆ.