ಬೆಂಗಳೂರು, ಜ. 13 (DaijiworldNews/MB) : ಇಂದು ಸಂಜೆ ಪ್ರಮಾಣವಚನ ಸ್ವೀಕರಿಸಲಿರುವ 7 ಶಾಸಕರ ಹೆಸರನ್ನು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಪ್ರಕಟಿಸಿದ್ದು ಈ ಪಟ್ಟಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಶಾಸಕ ಎಸ್. ಅಂಗಾರ ಅವರ ಹೆಸರು ಕೂಡಾ ಇದೆ.
ರಾಜಭವನಕ್ಕೆ ಎಸ್. ಅಂಗಾರ, ಅರವಿಂದ ಲಿಂಬಾವಳಿ, ಆರ್. ಶಂಕರ್, ಸಿ.ಪಿ. ಯೋಗೀಶ್ವರ್, ಉಮೇಶ್ ಕತ್ತಿ, ಮುರುಗೇಶ್ ನಿರಾಣಿ, ಎಂಟಿಬಿ ನಾಗರಾಜ್ ಅವರ ಹೆಸರನ್ನು ಕಳುಹಿಸಲಾಗಿದ್ದು ಸಂಜೆ ಅವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಇನ್ನು ಮುನಿರತ್ನ ಅವರ ಹೆಸರು ಈ ಪಟ್ಟಿಯಲ್ಲಿಲ್ಲ. ಈ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದಾಗ ಮುಖ್ಯಮಂತ್ರಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎನ್ನಲಾಗಿದೆ.
ಆದರೆ, ''ಅಬಕಾರಿ ಸಚಿವ ಎಚ್. ನಾಗೇಶ್ ಅವರನ್ನು ಸಂಪುಟದಿಂದ ಕೈ ಬಿಡಲು ತೀರ್ಮಾನಿಸಲಾಗಿದೆ. ಆದರೆ ಇಂದು ಅವರ ರಾಜೀನಾಮೆ ಪಡೆಯಲ್ಲ. ಅವರ ಮನವೊಲಿಸಲು ಯತ್ನಿಸಿ ನಾಳೆ ರಾಜೀನಾಮೆ ಪಡೆಯುತ್ತೇನೆ'' ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.