ಬೆಂಗಳೂರು, ಜ. 13 (DaijiworldNews/MB) : ಎಸ್ಎಸ್ಎಲ್ಸಿ ಪರೀಕ್ಷೆ ಪಠ್ಯಕ್ರಮವನ್ನು ಜನವರಿ 14 ರಂದು ಪ್ರಕಟಿಸಲಾಗುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಮಂಗಳವಾರ ತಿಳಿಸಿದ್ದಾರೆ.
ಮಂಗಳವಾರ ಚಾಮರಾಜನಗರ ತಾಲೂಕಿನ ನಲೂರು ಹಿರಿಯ ಪ್ರಾಥಮಿಕ ಶಾಲೆ ಸೇರಿದಂತೆ ವಿವಿಧ ಶಾಲೆಗಳಿಗೆ ಭೇಟಿ ನೀಡಿದ ವೇಳೆ ಮಾತನಾಡಿದ ಅವರು, ''ವಿದ್ಯಾರ್ಥಿಗಳು ಯಾವುದೇ ಭಯ ಪಡಬೇಕಾಗಿಲ್ಲ. ಈಗಾಗಲೇ ಪಠ್ಯ ನಿರ್ಧರಿಸಲಾಗಿದೆ. ಗುರುವಾರ ಎಸ್ಎಸ್ಎಲ್ಸಿ ಪರೀಕ್ಷೆ ಪಠ್ಯಕ್ರಮ ಪ್ರಕಟ ಮಾಡಲಾಗುತ್ತದೆ'' ಎಂದರು.
''ಬೋಧನೆ-ಕಲಿಕೆ ಹಾಗೂ ಮೌಲ್ಯಮಾಪನಕ್ಕೆ ಪಠ್ಯಾಂಶಗಳನ್ನು ಈಗಾಗಲೇ ಗುರುತಿಸಲಾಗಿದ್ದು ಶೀಘ್ರವೇ ಪ್ರಕಟಿಸಲಾಗುವುದು. ಈ ವಿಷಯಗಳನ್ನು ಒಳಗೊಂಡ ವಿವರವಾದ ಕೈಪಿಡಿಯನ್ನು ಎಲ್ಲ ಶಾಲೆಗಳಿಗೆ ನೀಡಲಾಗುವುದು. ಈ ವಿಚಾರದಲ್ಲಿ ಯಾವುದೇ ಆತಂಕ ಬೇಡ'' ಎಂದು ಹೇಳಿದರು.
''ಈ ಶೈಕ್ಷಣಿಕ ವರ್ಷದಲ್ಲಿ ಪಠ್ಯಪುಸ್ತಕಗಳಲ್ಲಿರುವ ಪೂರ್ಣ ವಿಷಯಗಳನ್ನು ಬೋಧಿಸುವುದು ಕಷ್ಟಸಾಧ್ಯವಾದ್ದರಿಂದ 2020-21 ಶೈಕ್ಷಣಿಕ ಸಾಲಿಗೆ ಲಭ್ಯವಾಗಬಹುದಾದ ದಿನಗಳಿಗೆ ಅನುಸಾರವಾಗಿ ಕೆಲವು ಪಠ್ಯಾಂಶಗಳನ್ನು ಮೌಲ್ಯಮಾಪನಕ್ಕೆ ಪರಿಗಣಿಸದಿರಲು ಇಲಾಖೆ ನಿರ್ಧರಿಸಿದೆ'' ಎಂದು ಇದೇ ವೇಳೆ ತಿಳಿಸಿದರು.
''ಶಾಲಾರಂಭವಾದ ಬಳಿಕ ಈವರೆಗೆ 150-170 ಶಾಲಾ ಕಾಲೇಜುಗಳಿಗೆ ಭೇಟಿ ನೀಡಿದ್ದೇನೆ. ಮಕ್ಕಳು ಮತ್ತು ಪೋಷಕರಲ್ಲಿ ಆತ್ಮವಿಶ್ವಾಸ ತುಂಬುವ ನಿಟ್ಟಿನಲ್ಲಿ ನಾನು ಭೇಟಿ ನೀಡುತ್ತಿದ್ದೇನೆ. ಮಕ್ಕಳ ಹಿತದೃಷ್ಟಿಯಿಂದ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಕ್ಕಳ ಅನಿಸಿಕೆಯನ್ನು ಪಡೆಯುತ್ತಿದ್ದೇನೆ'' ಎಂದು ತಿಳಿಸಿದರು.