ಕೋಲ್ಕತ್ತಾ, ಜ. 13 (DaijiworldNews/MB) : ''ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆಯನ್ನು ಆಚರಿಸಲು ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಯಾವುದೇ ಹಕ್ಕಿಲ್ಲ'' ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸೋದರಳಿಯ ಮತ್ತು ತೃಣಮೂಲ ಕಾಂಗ್ರೆಸ್ ಲೋಕಸಭಾ ಸಂಸದ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಹೇಳಿದರು.
ತೃಣಮೂಲ ಕಾಂಗ್ರೆಸ್ ವತಿಯಿಂದ ಕೋಲ್ಕತ್ತಾದ ಗೋಲ್ಪಾರ್ಕ್ನಿಂದ ಹಜ್ರಾಗೆ ನಡೆದ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅಭಿಷೇಕ್ ಬ್ಯಾನರ್ಜಿ, "ಸ್ವಾಮೀಜಿಯನ್ನು ಸ್ಮರಿಸುವ ಯಾವುದೇ ರ್ಯಾಲಿ ನಡೆಸಲು ಬಿಜೆಪಿಗೆ ಯಾವುದೇ ಹಕ್ಕಿಲ್ಲ. ಈ ಮಹಾನ್ ವ್ಯಕ್ತಿಯ ಬಗ್ಗೆ ಮಾತನಾಡಲು ಕೂಡಾ ಅವರಿಗೆ ಯಾವುದೇ ಹಕ್ಕಿಲ್ಲ'' ಎಂದು ಹೇಳಿದರು.
''ಅಮೇರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಮ್ಮ ವಿವೇಕಾನಂದ ಸ್ವಾಮಿಯವರ ಹೆಸರನ್ನು ತಪ್ಪಾಗಿ ಉಚ್ಚರಿಸಿದಾಗ ಅದನ್ನು ಪ್ರಧಾನಿ ನರೇಂದ್ರ ಮೋದಿ ಎಂದಿಗೂ ಪ್ರತಿಭಟಿಸಲಿಲ್ಲ'' ಎಂದು ದೂರಿದರು.
''ವಿವೇಕಾನಂದರ ಜನ್ಮ ದಿನಾಚರಣೆಯ ನೆಪದಲ್ಲಿ ತಮ್ಮ ಪಕ್ಷವು ಎಂದಿಗೂ ರಾಜಕೀಯ ಮಾಡುವ ಆ ಮಟ್ಟಕ್ಕೆ ಇಳಿಯುವುದಿಲ್ಲ'' ಎಂದು ಕೂಡಾ ಇದೇ ವೇಳೆ ಹೇಳಿದರು. "ನಾವು ಆ ಮಟ್ಟಕ್ಕೆ ಇಳಿಯಲು ಸಾಧ್ಯವಿಲ್ಲ. ಸ್ವಾಮೀಜಿಯ ಸಿದ್ಧಾಂತವು ಮುಂದಿನ ದಿನಗಳಲ್ಲಿ ನಮ್ಮನ್ನು ಮುನ್ನಡೆಸಲಿ" ಎಂದರು.
''ವಿಭಜನಾ ರಾಜಕಾರಣವನ್ನು ಬಂಗಾಳ ನಂಬುವುದಿಲ್ಲ. ಆದ್ದರಿಂದ ಮಮತಾ ಬ್ಯಾನರ್ಜಿ ಕೇಂದ್ರದ ಒತ್ತಡಕ್ಕೆ ಮಣಿಯುವುದಿಲ್ಲ'' ಎಂದು ಹೇಳಿದರು.
''ಸಿಎಎ ಕಾಯ್ದೆಯಿಂದ ರಾಷ್ಟ್ರವನ್ನು ಒಡೆಯಲು ಪ್ರಯತ್ನಿಸುತ್ತಿರುವ ಮತ್ತು ಈ ಹಿಂದೆ ಶಿಕ್ಷಣ ತಜ್ಞ ವಿದ್ಯಾಸಾಗರ್ ಅವರ ಪ್ರತಿಮೆಯನ್ನು ಧ್ವಂಸಗೊಳಿಸಿದ ರಾಜಕೀಯ ಪಕ್ಷವನ್ನು ಬಂಗಾಳದ ಜನರು ಎಂದಿಗೂ ಕ್ಷಮಿಸುವುದಿಲ್ಲ" ಎಂದು ಬ್ಯಾನರ್ಜಿ ಹೇಳಿದರು.