ಬೆಂಗಳೂರು, ಜ. 13 (DaijiworldNews/MB) : ಬಹುನಿರೀಕ್ಷಿತ ಸಂಪುಟ ವಿಸ್ತರಣೆ ಬುಧವಾರ ಸಂಜೆ ನಡೆಯಲಿದೆ. 7 ಶಾಸಕರು ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ. ಆದರೆ ಸಂಪುಟದ ಒಬ್ಬರು ಸಚಿವರನ್ನು ಕೈ ಬಿಡುವ ಸಾಧ್ಯತೆಯಿದೆ ಎಂದು ಹೇಳಿದರು.
ಮಂಗಳವಾರ ಸಂಪುಟ ವಿಸ್ತರಣೆಯ ಸಮಯದ ಬಗ್ಗೆ ಮಾಹಿತಿ ನೀಡಿದ ಸಂದರ್ಭದಲ್ಲೇ ಅವರು ಈ ಮಾಹಿತಿಯನ್ನು ನೀಡಿದ್ದಾರೆ. ''ಒಬ್ಬರು ಸಚಿವರನ್ನು ಕೈ ಬಿಡುವ ಬಗ್ಗೆ ಚರ್ಚಿಸಲಾಗಿದ್ದು, ಈ ಬಗ್ಗೆ ರಾತ್ರಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು'' ಎಂದು ಅವರು ಮಂಗಳವಾರ ತಿಳಿಸಿದ್ದಾರೆ.
ಇನ್ನು ಬಿಎಸ್ವೈ ಸಂಪುಟದಿಂದ ಅಬಕಾರಿ ಸಚಿವ ಎಚ್ ನಾಗೇಶ್ರನ್ನು ಕೈ ಬಿಡುವ ಸಾಧ್ಯತೆ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿದೆ. ಅಷ್ಟೇ ಅಲ್ಲದೇ ಕೋಟಾ ಶ್ರೀನಿವಾಸ್ ಪೂಜಾರಿ, ಶಶಿಕಲಾ ಜೊಲ್ಲೆ ಮತ್ತು ಪ್ರಭು ಚೌಹಾಣ್ ಹೆಸರು ಕೂಡಾ ಇದೆ ಎನ್ನಲಾಗಿದೆ.
ತನ್ನನ್ನು ಸಚಿವ ಸ್ಥಾನದಿಂದ ಕೈಬಿಡಲಾಗುವುದು ಎಂಬ ಸುದ್ದಿ ಹರಡುತ್ತಿದ್ದಂತೆಯೇ ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಅಬಕಾರಿ ಸಚಿವ ಎಚ್ ನಾಗೇಶ್, ''ಈ ಸರ್ಕಾರ ರಚನೆಗೆ ನಾನೇ ಪ್ರಮುಖ ಕಾರಣ, ನನ್ನನ್ನು ಯಾವುದೇ ಕಾರಣಕ್ಕೂ ಕೈ ಬಿಡಲ್ಲ. ನನ್ನನ್ನು ಸರ್ಕಾರದಿಂದ ಕೈಬಿಡುವಷ್ಟು ಧೈರ್ಯ ಯಾರಿಗಿದೆ ಸ್ವಾಮಿ'' ಎಂದು ಪ್ರಶ್ನಿಸಿದ್ದಾರೆ.