ಬಾಗಲಕೋಟೆ,ಜ.12 (DaijiworldNews/HR): ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 15 ಲಕ್ಷ ಆಶ್ರಯ ಮನೆಗಳ ನಿರ್ಮಾಣದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ವಸತಿ ಸಚಿವ ವಿ. ಸೋಮಣ್ಣ ಆರೋಪಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಆಸರೆ ಇಲ್ಲದ ಬಡವರಿಗೆ ಆಶ್ರಯ ಯೋಜನೆಯಡಿ ಮನೆ ಕಟ್ಟಿಕೊಡುವುದು ಸರ್ಕಾರದ ಉದ್ದೇಶವಾಗಿದೆ, ಆದರೆ ಕಾಂಗ್ರೆಸ್ ಸರ್ಕಾರದಲ್ಲಿ ಬರೋಬ್ಬರಿ 15 ಲಕ್ಷ ಮನೆ ನಿರ್ಮಾಣದಲ್ಲಿ ಭ್ರಷ್ಟಾಚಾರ ನಡೆದಿತ್ತು. ಯಂಕ, ಸೀನ ಹೆಸರಿನಲ್ಲಿ 6ರಿಂದ 7 ಮನೆ ಹಾಕಲಾಗಿದ್ದು, ಒಬ್ಬರಿಗೆ ಒಂದೇ ಮನೆ ಹಾಕಬೇಕು. ಒಬ್ಬೊಬ್ಬರ ಹೆಸರಿನಲ್ಲಿ ಆರೇಳು ಮನೆ ಇರುವುದು ಸರ್ಕಾರದ ಗಮನಕ್ಕೆ ಬಂದ ಬಳಿಕ ರಾಜ್ಯದಲ್ಲಿ ಸುಮಾರು 6 ಲಕ್ಷ ಮನೆಗಳ ಪ್ರಕ್ರಿಯೆ ಲಾಕ್ ಮಾಡಲಾಗಿತ್ತು. ಇದೀಗ ಸಮಗ್ರ ತನಿಖೆ ನಡೆಸಿದ ನಂತರ ಅರ್ಹರಾದವರಿಗೆ ಈ ವರ್ಷ ಒಟ್ಟು 1.17 ಲಕ್ಷ ಮನೆ ನಿರ್ಮಿಸಿಕೊಡಲಾಗಿದೆ" ಎಂದರು.
ಇನ್ನು "ಕರ್ನಾಟಕದ ಪ್ರತಿ ಗ್ರಾಮ ಪಂಚಾಯತಿಗೂ ತಲಾ 20 ಆಶ್ರಯ ಮನೆ ಮಂಜೂರು ಮಾಡಲಾಗುವುದು, ಐದು ವರ್ಷದಲ್ಲಿ ಒಂದೊಂದು ಪಂಚಾಯಿತಿಗೂ 100 ಮನೆ ಬರಲಿವೆ. ನೂತನವಾಗಿ ಆಯ್ಕೆಗೊಂಡ ಗ್ರಾ.ಪಂ. ಸದಸ್ಯರು, ಚುನಾವಣೆಯಲ್ಲಿ ತಮಗೆ ಮತ ಹಾಕದೇ ಇದ್ದರೂ ಬಡವರು-ಆಶ್ರಯ ಇಲ್ಲದವರಿದ್ದರೆ ಅವರಿಗೆ ಮನೆ ಮಂಜೂರು ಮಾಡಿಸಬೇಕು" ಎಂದು ಹೇಳಿದ್ದಾರೆ.