ನವದೆಹಲಿ, ಜ. 12 (DaijiworldNews/MB) : ಕೇಂದ್ರದ ಮೂರು ಕೃಷಿ ಕಾನೂನಿನ ಜಾರಿಗೆ ಸುಪ್ರೀಂ ಕೋರ್ಟ್ ತಾತ್ಕಲಿಕ ತಡೆ ನೀಡಿರುವುದನ್ನು ರೈತ ಮುಖಂಡರು ಸ್ವಾಗತಿಸಿದ್ದಾರೆ. ಆದರೆ ಪ್ರತಿಭಟನೆ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಸುದ್ದಿ ಸಂಸ್ಥೆಯೊಂದಕ್ಕೆ ಪ್ರತಿಕ್ರಿಯೆ ನೀಡಿರುವ 40 ರೈತ ಸಂಘಟನೆಗಳ ಒಕ್ಕೂಟ ಸಂಯುಕ್ತ ಕಿಸಾನ್ ಮೋರ್ಚಾದ ಹಿರಿಯ ಮುಖಂಡ ಅಭಿಮನ್ಯು ಕೊಹಾರ್, ''ಕೃಷಿ ಕಾಯ್ದೆಗಳಿಗೆ ತಡೆಯೊಡ್ಡಿದ ಸುಪ್ರೀಂ ಕೋರ್ಟ್ನ ತೀರ್ಪನ್ನು ನಾವು ಸ್ವಾಗತಿಸುತ್ತೇವೆ. ಆದರೆ ಈ ಕಾನೂನನ್ನು ಸಂಪೂರ್ಣವಾಗಿ ಈ ಕಾಯ್ದೆಯನ್ನು ಸಂಪೂರ್ಣವಾಗಿ ರದ್ದು ಪಡಿಸಬೇಕೆಂಬುದು ನಮ್ಮ ಬೇಡಿಕೆ'' ಎಂದು ತಿಳಿಸಿದ್ದಾರೆ.
ಮತ್ತೊಬ್ಬ ರೈತ ಮುಖಂಡ ಹರಿಂದರ್ ಲೋಖ್ವಾಲ್, ''ಕಾಯ್ದೆಯನ್ನು ಸಂಪೂರ್ಣವಾಗಿ ರದ್ದು ಮಾಡಿರದ ಹಿನ್ನೆಲೆ ನಮ್ಮ ಹೋರಾಟ ಮುಂದುವರೆಯಲಿದೆ. ಕಾಯ್ದೆ ರದ್ದುಪಡಿಸುವವರೆಗೂ ಈ ಪ್ರತಿಭಟನೆ ಮುಂದುವರಿಯಲಿದೆ'' ಎಂದು ಹೇಳಿದ್ದಾರೆ.
ಆದರೆ ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಮುಂದಿನ ಹೋರಾಟದ ಬಗ್ಗೆ ಚರ್ಚಿಸಲು ಸಂಯುಕ್ತ ಕಿಸಾನ್ ಮೋರ್ಚಾ ಸಭೆ ಕರೆದಿದೆ.
ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳ ರದ್ದತಿಗೆ ಆಗ್ರಹಿಸಿ ಕಳೆದ 48 ದಿನಗಳಿಂದ ದೆಹಲಿಯ ಹಲವು ಗಡಿಗಳಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಬಗ್ಗೆ ಮಂಗಳವಾರ ವಿಚಾರಣೆಯನ್ನು ಕೈಗೆತ್ತಿಕೊಂಡು ಸುಪ್ರೀಂ ಕೋರ್ಟ್ ಮೂರು ವಿವಾದಾತ್ಮಕ ಕಾಯ್ದೆಗಳಿಗೆ ತಾತ್ಕಾಲಿಕ ತಡೆ ನೀಡಿದೆ. ಕೃಷಿ ಕಾಯ್ದೆಯನ್ನು ಸಂಪೂರ್ಣವಾಗಿ ಅವಲೋಕಿಸಲು ಸಮಿತಿಯನ್ನು ಕೂಡಾ ಸುಪ್ರೀಂ ಕೋರ್ಟ್ ರಚಿಸಿದೆ.