ಮುಂಬೈ, ಜ. 12 (DaijiworldNews/MB) : ಕೇಂದ್ರದ ಮೂರು ಕೃಷಿ ಕಾನೂನಿನ ಜಾರಿಗೆ ಸುಪ್ರೀಂ ಕೋರ್ಟ್ ತಾತ್ಕಾಲಿಕ ತಡೆ ನೀಡಿರುವುದನ್ನು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್ಸಿಪಿ) ಸ್ವಾಗತಿಸಿದ್ದು, ''ರೈತರಿಗೆ ನ್ಯಾಯ ದೊರಕಿಸಲು ಇದು ಸರಿಯಾದ ದಾರಿ'' ಎಂದು ಹೇಳಿದೆ.
ಕೇಂದ್ರ ಸರಕಾರದ ನೂತನ ಕೃಷಿ ಕಾಯ್ದೆಯ ವಿರುದ್ದ ರೈತರು ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದೆ. ಈ ಬಗ್ಗೆ ಮಂಗಳವಾರ ವಿಚಾರಣೆಯನ್ನು ಕೈಗೆತ್ತಿಕೊಂಡು ಸುಪ್ರೀಂ ಕೋರ್ಟ್ ಮೂರು ವಿವಾದಾತ್ಮಕ ಕಾಯ್ದೆಗಳಿಗೆ ತಾತ್ಕಾಲಿಕ ತಡೆ ನೀಡಿದೆ. ಕೃಷಿ ಕಾಯ್ದೆಯನ್ನು ಸಂಪೂರ್ಣವಾಗಿ ಅವಲೋಕಿಸಲು ಸಮಿತಿಯನ್ನು ಕೂಡಾ ಸುಪ್ರೀಂ ಕೋರ್ಟ್ ರಚಿಸಿದೆ.
ಸುಪ್ರೀಂನ ಈ ಆದೇಶವನ್ನು ಸ್ವಾಗತಿಸಿ ಟ್ವೀಟ್ ಮಾಡಿರುವ ಮಹಾರಾಷ್ಟ್ರ ಸರ್ಕಾರದ ಸಚಿವ ಮತ್ತು ಎನ್ಸಿಪಿ ವಕ್ತಾರ ನವಾಬ್ ಮಲಿಕ್, ''ಕೃಷಿ ಕಾಯ್ದೆ ಅನುಷ್ಠಾನಕ್ಕೆ ಸುಪ್ರೀಂ ಕೋರ್ಟ್ ತಡೆಹಿಡಿದಿರುವುದು ನಮ್ಮ ರೈತರಿಗೆ ನ್ಯಾಯ ದೊರಕಿಸಿಕೊಡಲು ಸರಿಯಾದ ಹೆಜ್ಜೆಯಾಗಿದ್ದು, ಇದು ಸ್ವಾಗತಾರ್ಹ ಮತ್ತು ಸಕಾರಾತ್ಮಕ ಹೆಜ್ಜೆಯಾಗಿದೆ. ಕೇಂದ್ರ ಸರ್ಕಾರವು ಈಗ ತನ್ನ ಕಠಿಣ ಕಾರ್ಯ ವಿಧಾನಗಳನ್ನು ನಿಲ್ಲಿಸಬೇಕು. ಅವರ ತಪ್ಪನ್ನು ಒಪ್ಪಿಕೊಂಡು ಸರಿಪಡಿಸಬೇಕು'' ಎಂದು ಒತ್ತಾಯಿಸಿದೆ.