ನವದೆಹಲಿ, ಜ. 12 (DaijiworldNews/MB) : ಕೇಂದ್ರ ಸರಕಾರದ ನೂತನ ಕೃಷಿ ಕಾಯ್ದೆಯ ವಿರುದ್ದ ರೈತರು ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದೆ. ಈ ಬಗ್ಗೆ ಮಂಗಳವಾರ ವಿಚಾರಣೆಯನ್ನು ಕೈಗೆತ್ತಿಕೊಂಡು ಸುಪ್ರೀಂ ಕೋರ್ಟ್ ಮೂರು ವಿವಾದಾತ್ಮಕ ಕಾಯ್ದೆಗಳಿಗೆ ತಾತ್ಕಾಲಿಕ ತಡೆ ನೀಡಿದೆ.
ಮಂಗಳವಾರ ಈ ಬಗ್ಗೆ ವಿಚಾರಣೆ ನಡೆಸಿ ತೀರ್ಪು ನೀಡಿರುವ ಸುಪ್ರೀಂಕೋರ್ಟ್, ಕೃಷಿ ಕಾಯ್ದೆಯನ್ನು ಸಂಪೂರ್ಣವಾಗಿ ಅವಲೋಕಿಸಲು ಎಚ್ಎಸ್. ಮಾನ್, ಪ್ರಮೋದ್ ಕುಮಾರ್ ಜೋಶಿ, ಅಶೋಕ್ ಗುಲಾಟಿ ಹಾಗೂ ಅನಿಲ್ ಧಾವಂತ್ ಸೇರಿದಂತೆ ಒಟ್ಟು ನಾಲ್ಕು ಮಂದಿ ಕೃಷಿ ತಜ್ಞರನ್ನೊಳಗೊಂಡ ಸಮಿತಿಯನ್ನು ರಚಿಸಿದೆ.
ಪ್ರಸ್ತುತ ಎದುರಾಗಿರುವ ಸಮಸ್ಯೆಯನ್ನು ನಾವೇ ಸರಿಪಡಿಸಬೇಕಿದೆ. ಆದ್ದರಿಂದ ನಾವೇ ಸಮಿತಿಯೊಂದನ್ನು ರಚಿಸಿ ಕೃಷಿ ಕಾಯ್ದೆಯಲ್ಲಿರುವ ಸಾಧಕ ಬಾಧಕಗಳ ಬಗ್ಗೆ ಚರ್ಚೆ ನಡೆಸುತ್ತೇವೆ. ರೈತರು ಸಹಕಾರ ನೀಡಬೇಕು ಎಂದು ಹೇಳಿದ್ದಾರೆ.
ರೈತರ ಪರ ವಕೀಲ ಎಮ್ ಎಲ್ ಶರ್ಮಾ "ಹಲವಾರು ಮಂದಿ ನಮ್ಮೊಂದಿಗೆ ಚರ್ಚೆ ನಡೆಸಿದ್ದಾರೆ ಆದರೆ ಪ್ರಧಾನಿ ಮಾತ್ರ ಇದುವರೆಗೂ ನಮ್ಮೊಂದಿಗೆ ಚರ್ಚೆ ನಡೆಸಿಲ್ಲ ಎಂದು ರೈತರು ಹೇಳುತ್ತಿದ್ದಾರೆ" ಎಂದು ಸುಪ್ರೀಂ ಕೋರ್ಟ್ಗೆ ತಿಳಿಸಿದ್ದು, "ಪ್ರಧಾನಿಯನ್ನು ಪ್ರತಿಭಟನಾ ಸ್ಥಳಕ್ಕೆ ತೆರಳಿ ಎಂದು ನಾವು ಹೇಳಲಾಗದು" ಎಂದಿದೆ.
ಗಣರಾಜ್ಯೋತ್ಸವ ದಿನದಂದು ರೈತರು ಟ್ರ್ಯಾಕ್ಟರ್ ರ್ಯಾಲಿಯ ಮೂಲಕ ರಾಜಧಾನಿಗೆ ಪ್ರವೇಶಿಸದಂತೆ ತಡೆಯಲು ದೆಹಲಿ ಪೊಲೀಸರಿಗೆ ಸುಪ್ರೀಂ ಕೋರ್ಟ್ ಸೂಚಿಸಿದೆ.