ಚೆನ್ನೈ,ಜ.12 (DaijiworldNews/HR): ತಮಿಳುನಾಡಿನಲ್ಲಿ 10 ಹಾಗೂ 12 ನೇ ತರಗತಿಯ ವಿದ್ಯಾರ್ಥಿಗಳಿಗೆ ಜನವರಿ 19 ರಿಂದ ಶಾಲೆಯನ್ನು ಪುನರಾರಂಭಿಸಲಾಗುತ್ತಿದ್ದು, ಒಂದು ತರಗತಿಯಲ್ಲಿ 25ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಇರುವಂತಿಲ್ಲ ಎಂದು ತಮಿಳುನಾಡು ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು, 10 ಮತ್ತು 12ನೇ ತರಗತಿ ವಿದ್ಯಾರ್ಥಿಗಳು ಮಾರ್ಚ್-ಏಪ್ರಿಲ್ ತಿಂಗಳಲ್ಲಿ ಪಬ್ಲಿಕ್ ಪರೀಕ್ಷೆಯನ್ನು ಎದುರಿಸಲಿದ್ದು, ವಿದ್ಯಾರ್ಥಿಗಳ ಹಿತಾಸಕ್ತಿ ಮೇರೆಗೆ ತರಗತಿಗಳನ್ನು ತೆರೆಯಲಾಗುತ್ತಿದೆ. ಅಲ್ಲದೆ ಅವರಿಗೆ ವಿಟಮಿನ್ ಮಾತ್ರೆಗಳನ್ನು ಕೂಡ ನೀಡಲಾಗುತ್ತದೆ" ಎಂದರು.
ಇನ್ನು "ಸರ್ಕಾರದ ಮಾರ್ಗಸೂಚಿಯಡಿ ಕೇವಲ ಎರಡು ತರಗತಿಗಳಿಗಾಗಿ ಶಾಲೆಯನ್ನು ತೆರೆಯಲಿದ್ದು, ಸಾರ್ವಜನಿಕ ಆರೋಗ್ಯ, ವೈದ್ಯಕೀಯ ತಜ್ಞರು, ಜಿಲ್ಲಾಧಿಕಾರಿಗಳು, ಹಿರಿಯ ಸಚಿವರು ಮತ್ತು ಪೋಷಕರೊಂದಿಗೆ ಚರ್ಚೆ ನಡೆಸಿ ಈ ನಿರ್ಧಾರ ಕೈಗೊಳ್ಳಲಾಗಿದೆ" ಎಂದು ತಿಳಿಸಿದ್ಧಾರೆ.