ಉಡುಪಿ, ಜ. 12 (DaijiworldNews/MB) : "ಪ್ರಧಾನಿ ನರೇಂದ್ರ ಮೋದಿ ಅವರು ತೆಗೆದುಕೊಳ್ಳುವ ನಿರ್ಧಾರಗಳು ಯಾವಾಗಲೂ ದೇಶದ ಜನರ ಪರವಾಗಿರುತ್ತವೆ" ಎಂದು ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.
ಜನವರಿ 12 ರ ಮಂಗಳವಾರ ಪತ್ರಿಕಾಗೋಷ್ಠಿಯನ್ನುದ್ದೇಶಿ ಮಾತನಾಡಿದ ಅವರು, "ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಏರಿಕೆಯನ್ನು ದೂಷಿಸುವುದು ಜಾಣತನವಲ್ಲ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಪ್ರಸ್ತುತ ಸ್ಥಿತಿಗತಿಗೆ ಅನುಗುಣವಾಗಿ ಈ ಏರಿಳಿತಗಳು ಸಂಭವಿಸುತ್ತವೆ ಎಂದು ಹೇಳದ ಅವರು, ಬೆಲೆ ಏರಿಕೆ ಹೊರತಾಗಿಯೂ ಕೇಂದ್ರವು ನಾಗರಿಕರಿಗೆ ಸಬ್ಸಿಡಿ ನೀಡುತ್ತಿದೆ" ಎಂದರು.
"ರಾಜ್ಯದಲ್ಲಿ ವಿರೋಧ ಪಕ್ಷಗಳಿಲ್ಲ. ಜನರ ಹಕ್ಕುಗಳಿಗಾಗಿ ಧ್ವನಿ ನೀಡುವಲ್ಲಿ ರಾಜ್ಯ ಮತ್ತು ಕೇಂದ್ರದ ಬಿಜೆಪಿ ಸರ್ಕಾರದಷ್ಟು ಬೇರೆ ಯಾವ ಸರ್ಕಾರವು ಸದೃಢವಾಗಿಲ್ಲ. ಈ ಪಕ್ಷಗಳ ಧ್ವನಿ ಸಂಸತ್ತಿನಲ್ಲಿಯೂ ಕೇಳುವುದಿಲ್ಲ" ಎಂದು ಲೇವಡಿ ಮಾಡಿದರು.
ಕೊರೊನಾ ಸಾಂಕ್ರಾಮಿಕ ರೋಗದ ಬಗ್ಗೆ ಮಾತನಾಡಿದ ಅವರು, "ಸಾಂಕ್ರಾಮಿಕವು ಜಗತ್ತಿಗೆ ಪರೀಕ್ಷಾ ಸಮಯ. ಈಗ ಲಸಿಕೆ ಅಭಿವೃದ್ಧಿಪಡಿಸಲಾಗಿದ್ದು ಶೀಘ್ರದಲ್ಲೇ ಎಲ್ಲರಿಗೂ ಲಭ್ಯವಾಗಲಿದೆ. ನಮ್ಮ ಭಾರತೀಯ ಸಂಶೋಧಕರು ಇದರಲ್ಲಿ ಭಾಗಿಯಾಗಿದ್ದಾರೆ" ಎಂದು ಸಂತಸ ವ್ಯಕ್ತಪಡಿಸಿದರು.
"ಪೋಲಿಯೊ ನಿರ್ಮೂಲನೆಗೆ ಒಂದು ದಶಕ ಬೇಕಾಗಿದೆ. ಹೀಗಿರುವಾಗ ಕೊರೊನಾವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದು ಸುಲಭವಾಗಿಲ್ಲ. ಇದು ನಿಧಾನ ಪ್ರಕ್ರಿಯೆ, ಆದರೆ ಅಂತಿಮವಾಗಿ ಜಗತ್ತು ಕೊರೊನಾ ಮುಕ್ತವಾಗಿರುತ್ತದೆ" ಎಂದು ಭರವಸೆ ವ್ಯಕ್ತಪಡಿಸಿದರು.
ಈ ಸಮಯದಲ್ಲಿ ರಾಜಕೀಯ ಪಕ್ಷಗಳು ಮತ್ತು ನಾಯಕರು ರಾಜಕೀಯ ಲಾಭ ಪಡೆಯಲು ಮುಂದಾಗಬಾರದು ಎಂದು ಇದೇ ಸಂದರ್ಭ ಒತ್ತಾಯಿಸಿದರು.
ರೈತರ ಪ್ರತಿಭಟನೆಯ ಮಧ್ಯೆ ಪಾಕಿಸ್ತಾನ ಪರ ಘೋಷಣೆ ಕೇಳಿ ಬಂದಿದೆ ಎಂಬ ಆರೋಪದ ಕುರಿತು ಮಾತನಾಡಿದ ಅವರು, ಕೃಷಿ ಮಸೂದೆಗಳನ್ನು ರದ್ದುಗೊಳಿಸಲು ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ, ಈ ಪ್ರತಿಭಟನೆಗಳಲ್ಲಿ ಪಾಕಿಸ್ತಾನ ಪರ ಘೋಷಣೆಗಳನ್ನು ಕೂಗುತ್ತಾ ಅಶಾಂತಿ ಉಂಟುಮಾಡುವ ನಗರ ನಕ್ಸಲರು ಇದ್ದಾರೆ. ಕೃಷಿ ಕಾನೂನುಗಳು ಜಾರಿಗೆ ಬಂದ ನಂತರ ರೈತರಿಗೆ ಯಾವ ಪ್ರಯೋಜನಗಳು ಸಿಗುತ್ತವೆ ಎಂಬುದು ಗಮನಿಸಬೇಕಾದ ಪ್ರಮುಖ ವಿಷಯ. ಈ ಮಸೂದೆಗಳ ಸಾಧಕ-ಬಾಧಕಗಳನ್ನು ಚರ್ಚಿಸಬೇಕು. ಈ ಬಗ್ಗೆ ಸಂಸತ್ತಿನಲ್ಲಿ ಚರ್ಚಿಸಲಾಗುವುದು. ರಾಷ್ಟ್ರ ವಿರೋಧಿಗಳು ರೈತರನ್ನು ದಾರಿ ತಪ್ಪಿಸುವುದನ್ನು ತಡೆಯುವಂತೆ ನಾನು ಕೇಂದ್ರ ಮತ್ತು ಸುಪ್ರೀಂ ಕೋರ್ಟ್ಗೆ ಒತ್ತಾಯಿಸುತ್ತೇನೆ" ಎಂದರು.
"ಕೃಷಿ ಕಾನೂನುಗಳನ್ನು ರಾತ್ರೋರಾತ್ರಿ ಜಾರಿಗೆ ತರಲಾಗಿಲ್ಲ. ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಮತ್ತು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಅವರು ಕೃಷಿ ಸ್ಥಾಯಿ ಸಮಿತಿಯ ಭಾಗವಾಗಿದ್ದರು. ಚರ್ಚೆ ನಡೆದು ಈ ಮಸೂದೆ ಅಂಗೀಕಾರಗೊಂಡಿದೆ. ಆದರೆ ಈಗ ಮೂರು ತಿಂಗಳ ನಂತರ, ಈ ಕಾನೂನುಗಳ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿವೆ. ಇವು ರಾಜಕೀಯ ಪ್ರೇರಿತವೆಂದು ತೋರುತ್ತದೆ" ಎಂದು ಆರೋಪಿಸಿದರು.