ಉಡುಪಿ, ಜ. 12 (DaijiworldNews/MB) : ''ಎಲ್ಲಾ ಮುಸಲ್ಮಾನರು ದೇಶದ್ರೋಹಿಗಳಲ್ಲ, ದೇಶಭಕ್ತರೂ ಕೂಡಾ ಇದ್ದಾರೆ. ಆದರೆ ರಾಷ್ಟ್ರ ಭಕ್ತರೆಲ್ಲರೂ ಬಿಜೆಪಿಯವರೇ'' ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರಪ್ಪನವರು ಹೇಳಿದರು.
ಉಡುಪಿಯ ಮಣಿಪಾಲ್ ಇನ್ ಹೊಟೇಲ್ ಮತ್ತು ಕನ್ವೆಂಶನ್ ಸೆಂಟರ್ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ''ಎಲ್ಲಾ ಮುಸಲ್ಮಾನರು ದೇಶದ್ರೋಹಿಗಳಲ್ಲ, ದೇಶಭಕ್ತರೂ ಕೂಡಾ ಇದ್ದಾರೆ. ಮುಸಲ್ಮಾನರ ಓಟು ಬೇಡ ಎಂದು ನಾವು ಹೇಳಿಲ್ಲ'' ಎಂದರು.
''ರಾಷ್ಟ್ರ ಭಕ್ತರೆಲ್ಲರೂ ಬಿಜೆಪಿಯವರೇ, ಆದರೆ ಕಾಂಗ್ರೆಸ್ ನಾಯಕರು ಮುಸ್ಲಿಂ ಸಮುದಾಯವನ್ನು ಒಲಿಸುವಲ್ಲಿ ನಿರತವಾಗಿದೆ. ಅವರೆಲ್ಲರೂ ಕಾಂಗ್ರೆಸ್ಗೆ ಮತ ಹಾಕುತ್ತಾರೆ ಎನ್ನುವ ಭ್ರಮೆಯಲ್ಲಿ ಕಾಂಗ್ರೆಸ್ ಇದೆ'' ಎಂದು ಹೇಳಿದ ಅವರು, ''ಕಾಂಗ್ರೆಸ್ ತನ್ನ ಮನೋಭಾವನೆ ಬದಲಾಯಿಸಿಕೊಳ್ಳಬೇಕು'' ಎಂದು ಕುಟುಕಿದರು.
''ವಿರೋಧ ಪಕ್ಷದವರಿಗೆ ಎಸಿ ರೂಮ್ನಲ್ಲಿ ಕೂತು ಟ್ವೀಟ್ ಮಾಡುವುದೇ ಅಭ್ಯಾಸವಾಗಿ ಬಿಟ್ಟಿದೆ. ರಾಜ್ಯದಲ್ಲಿ ವಿರೋಧ ಪಕ್ಷವೇ ಇಲ್ಲದಂತಾಗಿದೆ. ಕಾಂಗ್ರೆಸ್ ರಾಜ್ಯದಲ್ಲಿ ನಿರ್ನಾಮ ಆಗಿದೆ'' ಎಂದು ಟೀಕಿಸಿದರು.
''ಜೆಡಿಎಸ್ ನಾಯಕ ಕುಮಾರಸ್ವಾಮಿ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗುವ ಹಗಲು ಕನಸನ್ನು ಕಾಣುತ್ತಿದ್ದಾರೆ'' ಎಂದು ಹೇಳಿದರು.
ಇನ್ನು ಪಾಕಿಸ್ತಾನ ಜಿಂದಾಬಾದ್ ಘೋಷಣೆ ಬಗ್ಗೆ ಮಾತನಾಡಿದ ಅವರು, ''ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದವರ ಸೊಕ್ಕು ಮುರಿಯುತ್ತೇವೆ'' ಎಂದು ಹೇಳಿದರು.
ಕೊರೊನಾ ಲಸಿಕೆ ರಾಜಕೀಯದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಈಶ್ವರಪ್ಪನವರು, ''ರಾಜಕೀಯ ಪರಿಜ್ಞಾನವೇ ಇಲ್ಲದ ವಿರೋಧ ಪಕ್ಷ ಈ ರಾಜ್ಯದಲ್ಲಿದೆ. ಅವರಿಗೆ ಎಲ್ಲಿ, ಯಾವ ವಿಚಾರದಲ್ಲಿ ರಾಜಕೀಯ ಮಾಡಬೇಕೆಂದು ತಿಳಿದಿಲ್ಲ. ಅದಕ್ಕೆ ನಾವೇನು ಮಾಡಲು ಆಗಲ್ಲ'' ಎಂದು ಟೀಕಿಸಿದರು.
''ರಾಜ್ಯದಲ್ಲಿ ಲಸಿಕೆ ಪೂರೈಕೆ ವ್ಯವಸ್ಥಿತವಾಗಿ ನಡೆಯುತ್ತದೆ. ನಾವು ಎಲ್ಲರ ಸಹಕಾರ ಕೋರುತ್ತೇವೆ. ಕಾಂಗ್ರೆಸ್ ಸಹಕಾರ ನೀಡಿದರೆ ಸಂತೋಷ, ಇಲ್ಲದಿದ್ದರೆ ಕಾಂಗ್ರೆಸ್ನ್ನು ಪಕ್ಕಕ್ಕಿಟ್ಟು ನಾವು ನಮ್ಮ ಕೆಲಸ ಮುಂದುವರಿಸುತ್ತೇವೆ'' ಎಂದರು.