ನವದೆಹಲಿ, ಜ. 12 (DaijiworldNews/MB) : ನಮ್ಮ ಆಪ್ನ್ನು ಅಪ್ಡೇಟ್ ಮಾಡುವುದರಿಂದ ಗೌಪ್ಯತೆಗೆ ಧಕ್ಕೆ ಉಂಟಾಗುವುದಿಲ್ಲ ಎಂದು ವಾಟ್ಸಾಪ್ ಸ್ಪಷ್ಟನೆ ನೀಡಿದೆ.
ಹಲವು ದಿನಗಳಿಂದ ವಾಟ್ಸಾಪ್ ಅಪ್ಡೇಟ್ ಬಗ್ಗೆ ವದಂತಿಗಳು ಹರಡುತ್ತಲ್ಲೇ ಇದೆ. ವಾಟ್ಸಾಪ್ ತೆರೆಯುತ್ತಿದ್ದಂತೆ ಮೊಬೈಲ್ ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳುವ ಈ ಅಪ್ಡೇಟ್ ಮಾಡಿದರೆ ಬಳಕೆದಾರರ ಎಲ್ಲಾ ಗೌಪ್ಯ ಸಂದೇಶಗಳು ಸೋರಿಕೆಯಾಗಲಿದೆ. ಎಲ್ಲಾ ಮಾಹಿತಿಯೂ ವಾಟ್ಸಾಪ್ ಸಂಸ್ಥೆಗೆ ಲಭ್ಯವಾಗಲಿದೆ. ಇದರಿಂದಾಗಿ ಬಳಕೆದಾರರ ಖಾಸಗಿತನಕ್ಕೆ ಧಕ್ಕೆ ಉಂಟಾಗಲಿದೆ ಎಂಬ ಸಂದೇಶಗಳು ಹರಡಿದ್ದವು. ಹಾಗೆಯೇ ಈ ಆಪ್ ಬದಲಾಗಿ ಸಿಗ್ನಲ್ ಆಪ್ ಬಳಸುವಂತೆ ಹಲವು ಮಂದಿ ಸಲಹೆ ನೀಡಲು ಆರಂಭಿಸಿದ್ದರು. ಇದರಂತೆ ಕೆಲವರು ಸಿಗ್ನಲ್ ಆಪ್ ಬಳಕೆಯನ್ನೂ ಆರಂಭಿಸಿರುವ ಉದಾಹರಣೆಗಳು ನಮ್ಮ ಕಣ್ಣ ಮುಂದಿದೆ.
ಕೆಲ ದಿನಗಳ ಹಿಂದೆ ''ನಾವು ಅಕ್ಟೋಬರ್ನಲ್ಲಿ ಘೋಷಿಸಿದಂತೆ, ವಾಟ್ಸಾಪ್ ಮೂಲಕ ಜನರಿಗೆ ಖರೀದಿ ಸುಲಭಗೊಳಿಸಲು ಮತ್ತು ಜನರು ನೇರವಾಗಿ ವಾಟ್ಸಾಪ್ನಿಂದ ವ್ಯವಹಾರ ಮಾಡಲು ಸಹಕರಿಸಲು ಬಯಸಿದ್ದೆವು. ಬಿಸ್ನೆಸ್ ಅಕೌಂಟ್ ಹೊಂದಿರುವವರಿಗೆ ಪಾರದರ್ಶಕತೆಯನ್ನು ಮತ್ತಷ್ಟು ಹೆಚ್ಚಿಸಲು, ವಾಟ್ಸಾಪ್ನಲ್ಲಿ ತಮ್ಮ ಗ್ರಾಹಕರೊಂದಿಗೆ ಮಾತುಕತೆ ನಡೆಸಲು ಸಹಾಯ ಮಾಡಲು, ವ್ಯವಹಾರಗಳ ಮೂಲ ಕಂಪನಿ ಫೇಸ್ಬುಕ್ನಿಂದ ಸುರಕ್ಷಿತ ಹೋಸ್ಟಿಂಗ್ ಸೇವೆಗಳನ್ನು ಪಡೆಯಲು ಆಯ್ಕೆ ಮಾಡಬಹುದು ಎಂದು ವಿವರಿಸಲು ನಾವು ಗೌಪ್ಯತೆ ನೀತಿಯನ್ನು ನವೀಕರಿಸಿದ್ದೇವೆ. ಇದರಿಂದಾಗಿ ಖಾಸಗಿ ಅಕೌಂಟ್ ಹೊಂದಿರುವವರ ಖಾಸಗೀತನಕ್ಕೆ ಧಕ್ಕೆಯಾಗದು'' ಎಂದು ವಾಟ್ಸಾಪ್ ಹೇಳಿತ್ತು.
ಮಂಗಳವಾರ ಈ ಬಗ್ಗೆ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿರುವ ವಾಟ್ಸಾಪ್ ಆಪ್, ''ನಾವು ಕೆಲವು ವದಂತಿಗಳ ಬಗ್ಗೆ ಸ್ಪಷ್ಟನೆ ನೀಡಲು ಬಯಸುತ್ತೇವೆ. ನಿಮ್ಮ ಖಾಸಗಿ ಸಂದೇಶಗಳನ್ನು ರಕ್ಷಿಸುವುದನ್ನು ನಾವು ಮುಂದುವರೆಸುತ್ತೇವೆ'' ಎಂದು ತಿಳಿಸಿದೆ.
''ನಮ್ಮ ಗೌಪ್ಯತೆ ನೀತಿ ನವೀಕರಣವು ಸ್ನೇಹಿತರು ಅಥವಾ ಕುಟುಂಬದೊಂದಿಗೆ ನಿಮ್ಮ ಸಂದೇಶಗಳ ಖಾಸಗೀತನಕ್ಕೆ ಪರಿಣಾಮ ಬೀರುವುದಿಲ್ಲ. ನಿಮ್ಮ ಗೌಪ್ಯತೆಯನ್ನು ನಾವು ರಕ್ಷಿಸುತ್ತೇವೆ ಮತ್ತು ಫೇಸ್ಬುಕ್ನೊಂದಿಗೆ ನಾವು ಹಂಚಿಕೊಳ್ಳಲಾರೆವು'' ಎಂದು ಸ್ಪಷ್ಟನೆ ನೀಡಿರುವ ವಾಟ್ಸಾಪ್, ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಲಿಂಕ್ ಒಂದನ್ನು ಟ್ವೀಟ್ನಲ್ಲಿ ಉಲ್ಲೇಖಿಸಿದೆ.