ಭೋಪಾಲ್,ಜ.12 (DaijiworldNews/HR): ನಕಲಿ ಮದ್ಯ ಸೇವಿಸಿದ ಪರಿಣಾಮ 10 ಮಂದಿ ಸಾವನ್ನಪ್ಪಿ, 10ಕ್ಕೂ ಅಧಿಕ ಮಂದಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಮಧ್ಯಪ್ರದೇಶದ ಮೊರೋನಾ ಜಿಲ್ಲೆಯ 2 ಗ್ರಾಮದಲ್ಲಿ ನಡೆದಿದೆ.
ಸಾಂಧರ್ಭಿಕ ಚಿತ್ರ
ಈ ಕುರಿತು ಮಾಹಿತಿ ನೀಡಿರುವ ಐಜಿಪಿ ಮನೋಜ್ ಶರ್ಮಾ, "ಮೊರೋನಾ ಜಿಲ್ಲೆಯ ಮಾನ್ಪುರಿ ಪೃಥ್ವಿ ಮತ್ತು ಪಹಾವಾಲಿ ಗ್ರಾಮಗಳಲ್ಲಿ ಈ ಸಾವು ಸಂಭವಿಸಿದ್ದು, ಅಸ್ವಸ್ಥರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವೈದ್ಯಕೀಯ ವರದಿಗಾಗಿ ಕಾಯಲಾಗುತ್ತಿದೆ" ಎಂದು ತಿಳಿಸಿದ್ದಾರೆ.
ಇನ್ನು ಮೃತಪಟ್ಟ 10 ಮಂದಿಯಲ್ಲಿ ಒಂದೇ ಕುಟುಂಬದ ಮೂವರು ಎನ್ನಲಾಗಿದ್ದು, ಮೂವರನ್ನು ಬಂಟಿ, ಜಿತೇಂದ್ರ ಗುರ್ಜಾರ್, ರಾಮ್ನಿವಾಸ್ ಗುರ್ಜಾರ್ ಎಂದು ಗುರುತಿಸಲಾಗಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಮಧ್ಯಪ್ರದೇಶ ಸಚಿವ ನರೋತ್ತಮ್ ಮಿಶ್ರಾ, ಈ ಘಟನೆಯ ಸಂಬಂಧ ಆರೋಗ್ಯಾಧಿಕಾರಿಗಳನ್ನು ಅಮಾನತು ಮಾಡಲಾಗಿದ್ದು, ಘಟನಾ ಸ್ಥಳಕ್ಕೆ ಈಗಾಗಲೇ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪ್ರಕರಣ ತನಿಖೆ ನಡೆಸಲು ತಂಡವನ್ನು ರಚನೆ ಮಾಡಲಾಗಿದೆ" ಎಂದು ತಿಳಿಸಿದ್ದಾರೆ.