ನವದೆಹಲಿ, ಜ. 12 (DaijiworldNews/MB) : ''ಬೇಡಿಕೆ ಸ್ಪಷ್ಟ, ಕೃಷಿ ವಿರೋಧಿ ಕಾನೂನನ್ನು ವಾಪಾಸ್ ಪಡೆಯಬೇಕು ಅಷ್ಟೇ'' ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.
ಈ ವಿಚಾರವಾಗಿ ಟ್ವೀಟ್ ಮಾಡಿರುವ ಅವರು, ''ಸತ್ಯಾಗ್ರಹಿ ರೈತರನ್ನು ಬೇರೆ ಬೇರೆ ವಿಚಾರದಲ್ಲಿ ಗೊಂದಲಕ್ಕೀಡುಮಾಡುವ ಸರ್ಕಾರದ ಪ್ರತಿಯೊಂದು ಪ್ರಯತ್ನವೂ ನಿಷ್ಪ್ರಯೋಜಕವಾಗಿದೆ. ಅನ್ನದಾತನು ಸರ್ಕಾರದ ಎಲ್ಲಾ ತಂತ್ರವನ್ನು ಅರ್ಥಮಾಡಿಕೊಳ್ಳುತ್ತಾನೆ. ಅವರ ಬೇಡಿಕೆ ಬಹಳ ಸ್ಪಷ್ಟವಾಗಿದೆ. ಕೃಷಿ ವಿರೋಧಿ ಕಾನೂನನ್ನು ವಾಪಾಸ್ ಪಡೆಯಬೇಕು ಅಷ್ಟೇ'' ಎಂದು ಒತ್ತಾಯಿಸಿದ್ದಾರೆ.
ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ, ಕಾಯ್ದೆಗಳನ್ನು ರದ್ದುಪಡಿಸುವಂತೆ ಆಗ್ರಹಿಸಿ ಕಳೆದ ಒಂದೂವರೆ ತಿಂಗಳಿನಿಂದ ರೈತರು ದೆಹಲಿಯ ಹಲವು ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸರ್ಕಾರ ಹಾಗೂ ರೈತ ಮುಖಂಡರ ನಡುವೆ ನಡೆದ 8ನೇ ಸುತ್ತಿನ ಮಾತುಕತೆಯೂ ಕೂಡಾ ವಿಫಲವಾಗಿದ್ದು, ಜ.15ರಂದು 9ನೇ ಸುತ್ತಿನ ಮಾತುಕತೆ ನಡೆಯಲಿದೆ. ಜನವರಿ 26ರೊಳಗೆ ನಮ್ಮ ಬೇಡಿಕೆ ಈಡೇರಿಸಬೇಕು ಇಲ್ಲದಿದ್ದರೆ ಗಣರಾಜ್ಯೋತ್ಸವದಂದು ದೆಹಲಿಗೆ ನುಗ್ಗುತ್ತೇವೆ ಎಂದು ರೈತರು ಎಚ್ಚರಿಕೆ ನೀಡಿದ್ದಾರೆ. ಅದಕ್ಕೆಂದು ರಾಜಧಾನಿಯ ಹೊರವಲಯದಲ್ಲಿ ಗುರುವಾರ ಟ್ರಾಕ್ಟರ್ ತಾಲೀಮು ಕೂಡ ಪ್ರಾರಂಭಿಸಿದ್ದರು.