ಪುಣೆ, ಜ. 12 (DaijiworldNews/MB) : ಕೊರೊನಾ ವೈರಸ್ ವಿರುದ್ದದ ಭಾರತದ ನಿರ್ಣಾಯಕ ಹೋರಾಟವು ಮಂಗಳವಾರ ಆರಂಭವಾಗಿದ್ದು ಕೋವಿಶೀಲ್ಡ್ ಲಸಿಕೆಯನ್ನು ಹೊತ್ತ ಮೂರು ಟ್ರಕ್ ದೇಶದ 13 ಕಡೆಗಳಿಗೆ ಪುಣೆ ವಿಮಾನ ನಿಲ್ದಾಣದಿಂದ ಮಂಗಳವಾರ ಪೂರೈಕೆಯಾಗುತ್ತಿದೆ.
ಜನವರಿ 16ರಂದು ಲಸಿಕೆ ಅಭಿಯಾನ ಆರಂಭವಾಗಲಿದ್ದು, ಅದಕ್ಕೂ ಮುನ್ನ ಮಂಗಳವಾರ ಕೋವಿಶೀಲ್ಡ್ ದೇಶದ ವಿವಿಧ ಭಾಗಗಳಿಗೆ ತಲುಪಲಿದೆ. ತೀವ್ರ ಭದ್ರತೆಯೊಂದಿಗೆ ಲಸಿಕೆಯನ್ನು ಮೂರು ಟ್ರಕ್ಗಳಲ್ಲಿ ದೇಶದ ವಿವಿಧ ಕಡೆಗಳಿಗೆ ರವಾನಿಸಲಾಗುತ್ತಿದೆ. ಬೆಂಗಳೂರು, ದೆಹಲಿ, ಕರ್ನಲ್, ಅಹಮದಾಬಾದ್, ವಿಜಯವಾಡ, ಭುವನೇಶ್ವರ, ಕೋಲ್ಕತ್ತಾ, ಗುವಾಹಟಿ, ಚೆನ್ನೈ, ಹೈದರಾಬಾದ್, ಚಂಡೀಗಢ ಮತ್ತು ಲಕ್ನೊಗೆ ತಲುಪಲಿದೆ.
ಕೋವಿಶೀಲ್ಡ್ ಲಸಿಕೆಯನ್ನು ಪುಣೆಯಿಂದ ವಿವಿಧ ವಿಮಾನ ನಿಲ್ದಾಣಗಳಿಗೆ ತಲುಪಿಸುವ ಹೊಣೆ ಹೊತ್ತಿರುವ ಎಸ್ ಬಿ ಲಾಜಿಸ್ಟಿಕ್ಸ್ ತಂಡದ ಸಂದೀಪ್ ಬೊಸಲೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿ, ''ಲಸಿಕೆಯನ್ನು ಹೊತ್ತ ಮೊದಲ ವಿಮಾನ ಪುಣೆ ವಿಮಾನ ನಿಲ್ದಾಣದಿಂದ ದೆಹಲಿಗೆ ಹೊರಡಲಿದೆ. 8 ವಿಮಾನಗಳು, ಎರಡು ಕಾರ್ಗೊ ವಿಮಾನಗಳು ಮತ್ತು ಇತರ ನಿತ್ಯದ ವಾಣಿಜ್ಯ ವಿಮಾನಗಳು ಲಸಿಕೆಯನ್ನು ರವಾನಿಸಲಿದ್ದು ಎಲ್ಲಾ ಲಸಿಕೆಗಳು ಮಂಗಳವಾರ ಮುಂಜಾನೆ ವಿತರಣೆಯಾಗಲಿವೆ'' ಎಂದು ತಿಳಿಸಿದರು.