ಬೆಂಗಳೂರು, ಜ. 12 (DaijiworldNews/MB) : ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದ ಆರೋಪ ಹೊಂದಿರುವ, ನಾಪತ್ತೆಯಾಗಿದ್ದ ಮಾಜಿ ಸಚಿವ ಜೀವರಾಜ್ ಆಳ್ವಾ ಪುತ್ರ ಆದಿತ್ಯ ಆಳ್ವಾ ಕೊನೆಗೂ ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾನೆ ಎಂದು ವರದಿ ತಿಳಿಸಿದೆ.
ಕಳೆದ ರಾತ್ರಿ ಚೆನ್ನೈನಲ್ಲಿ ಬೆಂಗಳೂರು ಸಿಸಿಬಿ ಪೊಲೀಸರು ಆದಿತ್ಯ ಆಳ್ವಾನನ್ನು ಬಂಧಿಸಿದ್ದು ಪ್ರಸ್ತುತ ಬೆಂಗಳೂರಿಗೆ ಕರೆತಂದು ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಯಲ್ಲಿ ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಡ್ರಗ್ಸ್ ಪ್ರಕರಣದ ತನಿಖೆ ಆರಂಭವಾಗುತ್ತಿದ್ದಂತೆ 2020ರ ಸೆಪ್ಟೆಂಬರ್ನಲ್ಲಿ ಆದಿತ್ಯ ರೆಸಾರ್ಟ್ ಮೇಲೆ ಬೆಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು. ದಾಳಿ ಸಂದರ್ಭ ರೆಸಾರ್ಟ್ನಲ್ಲಿ ಗಾಂಜಾ, ಮಾತ್ರೆಗಳು ಪತ್ತೆಯಾಗಿದ್ದವು.
ಬಳಿಕ ಡ್ರಗ್ಸ್ ಪ್ರಕರಣದಲ್ಲಿ ಆದಿತ್ಯ ಆಳ್ವಾನ ಪತ್ತೆ ಕಾರ್ಯ ನಡೆಸಿದ್ದ ಸಿಸಿಬಿ ಪೊಲೀಸರು, ಆದಿತ್ಯಾ ಆಳ್ವಾ ಸಹೋದರಿ, ನಟ ವಿವೇಕ್ ಒಬೆರಾಯ್ ಪತ್ನಿ ಪ್ರಿಯಾಂಕಾ ಆಳ್ವಾ ನಿವಾಸದ ಮೇಲೆಯೂ ದಾಳಿ ನಡೆಸಿದ್ದರು. ಪ್ರಿಯಾಂಕಾರ ವಿಚಾರಣೆ ಕೂಡಾ ನಡೆಸಿದ್ದರು. ಬಂಧನ ಭೀತಿಯಿಂದ ಮುಂಬೈ ಸೇರಿದಂತೆ ಹಲವೆಡೆ ತಲೆಮರೆಸಿಕೊಂಡಿದ್ದ ಆದಿತ್ಯ ಆಳ್ವಾ, ಕಳೆದ 15 ದಿನಗಳಿಂದ ಚೆನ್ನೈ ಹೊರವಲಯದ ರೆಸಾರ್ಟ್ನಲ್ಲಿ ಇದ್ದ ಎನ್ನಲಾಗಿದೆ.