ನವದೆಹಲಿ, ಜ. 12 (DaijiworldNews/MB) : ನಗ್ನ ಚಿತ್ರಗಳು ಮತ್ತು ಅಶ್ಲೀಲ ಚಾಟ್ಗಳ ಮೋಹಕ್ಕೆ ಬಿದ್ದು ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್ಐಗೆ ಭಾರತೀಯ ಸೇನೆಯ ರಹಸ್ಯ ಮಾಹಿತಿಗಳನ್ನು ರವಾನೆ ಮಾಡಿದ್ದ ವ್ಯಕ್ತಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ರಾಜಸ್ಥಾನದ ಜೈಸಲ್ಮೇರ್ ಸಮೀಪದ ನಿವಾಸಿಯಾಗಿರುವ ಸತ್ಯನಾರಾಯಣ ಪಲಿವಾಲ್ ಬಂಧಿತ ಆರೋಪಿ.
ಈತನಿಗೆ ಮಹಿಳೆಯೋರ್ವಳು ಫೇಸ್ಬುಕ್ ನಕಲಿ ಖಾತೆ ಮೂಲಕ ಪರಿಚಯವಾಗಿದ್ದು, ಅದರಲ್ಲೇ ಮಾಹಿತಿ ರವಾನೆ ಮಾಡುತ್ತಿದ್ದ ಎಂದು ಹೇಳಲಾಗಿದೆ.
''ಐಎಸ್ಐ ಪರವಾಗಿ ನನ್ನೊಂದಿಗೆ ಮಾತನಾಡಿದ್ದ ಮಹಿಳೆ ನಗ್ನ ಚಿತ್ರಗಳನ್ನು ಕಳುಹಿಸಿ ಅದಕ್ಕೆ ಪ್ರತಿಯಾಗಿ ಗಡಿಯಲ್ಲಿನ ಸೇನೆಯ ಚಲನವಲನಗಳ ಬಗ್ಗೆ ಹಾಗೂ ಪೊಖ್ರಾನ್ ಸೇನಾ ನೆಲೆಯ ಮಾಹಿತಿಗಳನ್ನು ಮಾಹಿತಿ ಕೇಳಿದ್ದಳು. ನಗ್ನ ಚಿತ್ರಗಳಿಗೆ ಬದಲಾಗಿ ನಾನು ಹಲವಾರು ಸೇನಾ ಮಾಹಿತಿಗಳನ್ನು ನೀಡಿದ್ದೇನೆ'' ಎಂದು ಆತ ಹೇಳಿರುವುದಾಗಿ ವರದಿ ತಿಳಿಸಿದೆ.
ಇನ್ನು ಈ ಮಹಿಳೆಗೆ ಆತನು ಹಲವಾರು ತಿಂಗಳುಗಳಿಂದ ಸಂದೇಶ ಕಳುಹಿಸುತ್ತಿದ್ದಾನೆ ಎನ್ನಲಾಗಿದೆ. ಸತ್ಯನಾರಾಯಣನ ಫೋನ್ ಪರಿಶೀಲನೆ ನಡೆಸಿದಾಗ ಸೇನೆಗೆ ಸಂಬಂಧಿಸಿದ ಹಲವಾರು ದಾಖಲೆಗಳು ಆತನಲ್ಲಿ ಇರುವುದು ತಿಳಿದು ಬಂದಿದೆ ಎಂದು ವರದಿಯಾಗಿದೆ.