ಬೆಂಗಳೂರು, ಜ 11 (DaijiworldNews/SM): ಜನವರಿ 13ಕ್ಕೆ ಸಚಿವ ಸಂಪುಟ ವಿಸ್ತರಣೆಗೆ ಯಡಿಯೂರಪ್ಪನವರಿಗೆ ಹೈಕಮಾಂಡ್ ಹಸಿರು ನಿಶಾನೆ ತೋರಿದೆ. ಆದರೆ, ಕರಾವಳಿ ಭಾಗದ ಶಾಸಕರಲ್ಲಿ ನಿರಾಸೆ ಮೂಡಿದೆ.
ಈ ಬಾರಿ ಕೇವಲ ಸಂಪುಟ ವಿಸ್ತರಣೆಗಷ್ಟೇ ಸೀಮಿತಗೊಳಿಸಲಾಗಿದೆ. ಪುನರ್ರಚನೆ ಕನಸು ಕಾಣುತ್ತಿದ್ದ ಶಾಸಕರಿಗೆ ಮತ್ತೊಮ್ಮೆ ನಿರಾಸೆಯುಂಟಾಗಿದೆ. ಸುಳ್ಯ ಶಾಸಕ ಅಂಗಾರ ಈ ಬಾರಿ ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದರು. ಕಾರ್ಕಳ ಶಾಸಕ ಸುನಿಲ್ ಕುಮಾರ್ ಈ ಬಾರಿ ಸಚಿವನಾಗುವ ಆಕಾಂಕ್ಷೆಯಲ್ಲಿದ್ದರು. ಹಾಲಾಡಿ ಶ್ರೀನಿವಾಸ ಶೆಟ್ಟಿ, ಲಾಲಾಜಿ ಮೆಂಡನ್ ಹೆಸರು ಕೂಡಾ ಸಚಿವ ಸ್ಥಾನಕ್ಕೆ ಕೇಳಿಬಂದಿತ್ತು. ಆದರೆ ಈ ಬಾರಿ ಕರಾವಳಿಯ ಯಾರಿಗೂ ಸಚಿವನಾಗುವ ಭಾಗ್ಯ ಲಭಿಸಿಲ್ಲ.
4, 3 ಸೂತ್ರದ ಅಡಿಯಲ್ಲಿ ಸಚಿವ ಸಂಪುಟ ವಿಸ್ತರಣೆ ಮಾಡುವಂತಹ ಸಾಧ್ಯತೆ ಇದೆ ಎನ್ನಲಾಗಿದೆ. ವಲಸೆ ಕೋಟಾದಲ್ಲಿ-ಎಂಟಿಬಿ ನಾಗರಾಜ್, ಆರ್.ಶಂಕರ್, ಮುನಿರತ್ನ ಸಚಿವ ಭಾಗ್ಯ ಬಹುತೇಕ ಖಚಿತವಾಗಿದೆ. ಬಿಜೆಪಿಯಿಂದ- ಉಮೇಶ್ ಕತ್ತಿ, ಅರವಿಂದ ಲಿಂಬಾವಳಿ, ಸಿಪಿ ಯೋಗೀಶ್ವರ್ ಅವರಿಗೆ ಬಹುತೇಕ ಸಚಿವ ಸ್ಥಾನ ಖಚಿತ ಎನ್ನಲಾಗಿದೆ.
ಉಳಿದ ಒಂದು ಸ್ಥಾನಕ್ಕೆ ತೀವ್ರ ಪೈಪೋಟಿ ಎದುರಾಗಿದ್ದು, 14 ಶಾಸಕರ ನಡುವೆ ತೀವ್ರ ಪೈಪೋಟಿ ಎದುರಾಗಿದೆ. ಅಂತಿಮ ಕ್ಷಣದಲ್ಲಿ ಒಂದು ಸೀಟು ಖಾಲಿ ಇಡುವ ಚಿಂತನೆ ನಡೆದಿದೆ.