ಉಡುಪಿ, ಜ 11 (DaijiworldNews/SM): ಅಷ್ಟಮಿ ಸಂದರ್ಭ ವಿಭಿನ್ನ ರೀತಿಯಲ್ಲಿ ವೇಷತೊಟ್ಟು ಸಂಗ್ರಹವಾದ ಹಣವನ್ನು ಅನಾರೋಗ್ಯ ಪೀಡಿತರು ಹಾಗೂ ತೀರಾ ಬಡತನದಲ್ಲಿದ್ದವರಿಗೆ ನೀಡುವ ಮಹತ್ತರದ ಮಾನವೀಯ ಕಾರ್ಯವನ್ನು ನಡೆಸಿಕೊಂಡು ಬರುತ್ತಿರುವ ರವಿ ಕಟಪಾಡಿಯವರು ಸೋನಿ ವಾಹಿನಿಯ ‘ಕೌನ್ ಬನೇಗ ಕರೋಡ್ ಪತಿ’ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರವಿ ಕಟಪಾಡಿ ಮಾನವೀಯ ಕೆಲಸ ಗುರುತಿಸಿ ಸೋನಿ ವಾಹಿನಿ ಅವರನ್ನು ಆಯ್ಕೆ ಮಾಡಿದೆ.
1 ವಾರದ ಹಿಂದೆ ರವಿ ಕಟಪಾಡಿಗೆ ಸೋನಿ ಟಿವಿಯಿಂದ ಕರೆ ಬಂದಿತ್ತು. ಆ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸುವುದು ತನ್ನಿಂದ ಅಸಾಧ್ಯವೆಂದು ರವಿ ಕಟಪಾಡಿ ಪ್ರತಿಕ್ರಿಯೆ ನೀಡಿದ್ದರು. ಆರಂಭದಲ್ಲಿ ಅಸಾಧ್ಯವೆಂದು ಹಿಂದಕ್ಕೆ ಸರಿದಿದ್ದರು. ಬಳಿಕ ರವಿಯವರಿಗೆ ವಾಹಿನಿಯವರು ಧೈರ್ಯ ತುಂಬಿದ್ದಾರೆ. ನಿಮ್ಮ ಕೆಲಸವನ್ನು ಸಮಾಜಕ್ಕೆ ತಿಳಿಸಲು ಸಲುವಾಗಿ ಭಾಗವಹಿಸಲೇಬೇಕು ಎಂಬು ವಿನಂತಿಸಿದ್ದರು. ವಾಹಿನಿಯವರೇ ರವಿಯವರಿಗೆ ಧೈರ್ಯ ತುಂಬಿದ ಬಳಿಕ ಅವರು ಸಮ್ಮತಿ ಸೂಚಿಸಿದ್ದಾರೆ.
ಈ ಹಿನ್ನೆಲೆ 3 ದಿನದ ಹಿಂದೆ ವಾಹಿನಿಯವರು ಕಟಪಾಡಿಗೆ ಬಂದು ಶೂಟಿಂಗ್ ನಡೆಸಿದ್ದರು. ರವಿಯವರ ಕಟಪಾಡಿಯ ಮನೆ ಹಾಗೂ ಕೆಲಸದ ಸ್ಥಳದಲ್ಲಿ ಸೋನಿಟಿವಿಯ ಸದಸ್ಯರು ಶೂಟಿಂಗ್ ನಡೆಸಿದ್ದಾರೆ. ಇನ್ನು ಸದ್ಯ ರವಿ ಕಟಪಾಡಿಯವರು ಮುಂಬೈಗೆ ತೆರಳಿದ್ದಾರೆ. ಬುಧವಾರದಂದು ಮುಂಬೈನ ವಾಹಿನಿಯ ಸ್ಟುಡಿಯೋದಲ್ಲಿ ಶೂಟಿಂಗ್ ಆರಂಭಗೊಳ್ಳಲಿದ್ದು, ಜನವರಿ ೧೫ರಂದು ಸೋನಿ ವಾಹಿನಿಯಲ್ಲಿ ಕಾರ್ಯಕ್ರಮ ಪ್ರಸಾರಗೊಳ್ಳಲಿದೆ ಎಂದು ತಿಳಿದುಬಂದಿದೆ.
ಆರಂಭದ ಕೆಲವು ಪ್ರಶ್ನೆಗಳಿಗೆ ರವಿ ಕಟಪಾಡಿ ಉತ್ತರಿಸಲಿದ್ದು, ಬಳಿಕ ಸಿನಿಮಾ ರಂಗದ ಪ್ರಮುಖರು ಜೊತೆಯಾಗಲಿದ್ದಾರೆ.