ಮೈಸೂರು, ಜ.11 (DaijiworldNews/PY): "ಗಾಂಧಿ, ಅಂಬೇಡ್ಕರ್ ಹಾಗೂ ಗೋಹತ್ಯೆ ಶಾಪವು ಕಾಂಗ್ರೆಸ್ ಪಕ್ಷಕ್ಕೆ ತಟ್ಟಿದ್ದು, ಈ ಕಾರಣದಿಂದ ಕಾಂಗ್ರೆಸ್ ಧೂಳಿಪಟವಾಗಿದೆ" ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ಮೈಸೂರಿನಲ್ಲಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಜಯಗಳಿಸಿದ ಬಿಜೆಪಿ ಬೆಂಬಲಿತ ಸದಸ್ಯರಿಗೆ ಪುಷ್ಪವೃಷ್ಟಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
"ಕಾಂಗ್ರೆಸ್ ಪಕ್ಷ ಗಾಂಧಿ ಅವರ ಹೆಸರು ಹೇಳಿಕೊಂಡು ಅಧಿಕಾರಕ್ಕೇರಿತು. ಆದರೆ, ಅವರ ವಿಚಾರಧಾರೆ ಹಾಗೂ ಗ್ರಾಮ ಸ್ವರಾಜ್ಯದ ಪರಿಕಲ್ಪನೆಯನ್ನು ಕಾಂಗ್ರೆಸ್ ಮರೆಯಿತು. ಮತಕ್ಕಾಗಿ ಅಂಬೇಡ್ಕರ್ ಅವರ ಫೋಟೋ ಬಳಸಿದರು. ಇನ್ನು ಚುನಾವಣೆಯ ಸಂದರ್ಭ ಗೋಮಾತೆಯ ಚಿಹ್ನೆ ಅಡಿಯಲ್ಲಿ ಕಾಂಗ್ರೆಸ್ ಜಯ ಗಳಿಸಿತು. ಆದರೆ, ಆ ವಿಚಾರಣೆಗಳನ್ನೆಲ್ಲಾ ಮರೆತು ಗೋ ಹಂತಕರಿಗೆ ಮಣೆ ನೀಡಿತು. ಗೋಮಾಂಸ ಸೇವನೆಯ ಹೇಳಿಕೆ ನೀಡಿ ದೇಶದ ಸಂಸ್ಕೃತಿಗೆ ಅವಮಾನ ಮಾಡುತ್ತಿದೆ" ಎಂದರು.
"ಈ ಕಾರಣದಿಂದ ಕಾಂಗ್ರೆಸ್ ಪಕ್ಷಕ್ಕೆ ಮೂರು ಶಾಪ ತಟ್ಟಿದೆ. ಸದ್ಯ ಕಾಂಗ್ರೆಸ್ನಲ್ಲಿ ನಾಯಕತ್ವಕ್ಕಾಗಿ ಜಗಳವಾಗುತ್ತಿದೆ. ಸಿದ್ದರಾಮಯ್ಯ ಟವೆಲ್ ಹಾಕಿದ್ದು, ಅದನ್ನು ಎಳೆಯಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಯತ್ನಿಸುತ್ತಿದ್ದಾರೆ" ಎಂದು ಹೇಳಿದರು.