ಹುಬ್ಬಳ್ಳಿ, ಜ.11 (DaijiworldNews/PY): "ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಯನ್ನು ಉದ್ದೇಶಿಸಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಯನ್ನು ಬೆಂಬಲಿಸಿ ಕಾಂಗ್ರೆಸ್ ವತಿಯಿಂದ ಜ. 20 ರಂದು ರಾಜಭವನ ಚಲೋ ನಡೆಸಲಾಗುವುದು" ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದರು.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂದು ಹೇಳಿ ಕೇಂದ್ರ ಸರ್ಕಾರ ಯಾಮಾರಿಸಿದೆ. ಪ್ರಧಾನಿ ಮೋದಿ ಹೇಳುವುದು ಒಂದು ಮಾಡುವುದು ಇನ್ನೊಂದು" ಎಂದರು.
ರಾಜ್ಯ ಸರ್ಕಾರದ ಸಂಪುಟ ವಿಸ್ತರಣೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಈ ಬಗ್ಗೆ ಇನ್ನೂ ಕೂಡಾ ಸ್ಪಷ್ಟತೆ ಇಲ್ಲ. ಸಿಎಂ ಬಿಎಸ್ವೈ ಅವರು ಸಿಹಿ ಸುದ್ದಿ ನೀಡುತ್ತೇವೆ ಎಂದಿದ್ದಾರೆ. ಆದರೆ, ಈ ಬಗ್ಗೆ ಹೈಕಮಾಂಡ್ ಏನು ಹೇಳಿದೆಯೋ?" ಎಂದು ಕೇಳಿದರು.
"ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪ ಅವರನ್ನು ಕೆಳಕ್ಕಿಳಿಸುತ್ತೇವೆ ಎಂದು ನನಗೆ ಆರ್ಎಸ್ಎಸ್ನವರೇ ತಿಳಿಸಿದ್ದಾರೆ. ನನಗೆ ಆರ್ಎಸ್ಎಸ್ ಸೇರಿದಂತೆ ಉಳಿದ ಪಕ್ಷಗಳಲ್ಲೂ ಕೂಡಾ ಮಿತ್ರರಿದ್ದಾರೆ" ಎಂದು ಹೇಳಿದರು.
"ಬಿಜೆಪಿ ಶೇ 30 ಪರ್ಸಟ್ ಸರ್ಕಾರ. ಹಣ ನೀಡದೇ ಯಾವುದೇ ಕಡತ ಕೂಡಾ ವಿಲೇವಾರಿಯಾಗುವುದಿಲ್ಲ. ಅಲ್ಲದೇ, ಎನ್ಒಸಿ ಹಾಗೂ ಯೋಜನೆಗಳಿಗೆ ಅನುಮೋದನೆ ದೊರಕುವುದಿಲ್ಲ. ಕಾಂಗ್ರೆಸ್ ಸರ್ಕಾರ ಇದ್ದ ಸಂದರ್ಭ ಯಾವುದಾದರೂ ಹಗರಣ ಇದ್ದರೆ ತೋರಿಸಲಿ" ಎಂದರು.