ಬೀದರ್, ಜ.11 (DaijiworldNews/PY): "ಸಿಎಂ ಬದಲಾವಣೆ ವಿಚಾರದ ಬಗ್ಗೆ ಮಾತನಾಡಲು ಸಿದ್ದರಾಮಯ್ಯ ಅವರೇನು ಬಿಜೆಪಿ ಪಕ್ಷದ ವಕ್ತಾರರೇ ಅಥವಾ ವರಿಷ್ಠರೇ?" ಎಂದು ಬೃಹತ್ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್ ಪ್ರಶ್ನಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಪ್ರತೀ ಚುನಾವಣೆಯಲ್ಲಿ ಕಾಂಗ್ರೆಸ್ ಸೋತು ಸುಣ್ಣವಾಗುತ್ತಿತ್ತು, ಇದೀಗ ಪಕ್ಷಕ್ಕೆ ಗತಿ ಇಲ್ಲಂದತ ಪರಿಸ್ಥಿತಿ ಬಂದಿದೆ. ಈ ಬಗ್ಗೆ ಚರ್ಚೆ ಮಾಡಿ, ನಿಮ್ಮ ಹಾಗೂ ಡಿ.ಕೆ.ಶಿವಕುಮಾರ್ ಅವರ ನಡುವಿನ ಸಂಬಂಧವನ್ನು ಸರಿಪಡಿಸಿ. ಸುಖಾಸುಮ್ಮನೆ ಆರೋಪಗಳನ್ನು ಮಾಡುವುದು ಬಿಟ್ಟು ಸರ್ಕಾರಕ್ಕೆ ನೆರವಾಗುವಂತ ರಚನಾತ್ಮಕ ಸಲಹೆಗಳನ್ನು ನೀಡಲಿ" ಎಂದರು.
"ಬಿಜೆಪಿ ಸರ್ಕಾರದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ. ನಾಯಕತ್ವದ ಬದಲಾವಣೆ ಬಗ್ಗೆ ಮಾತನಾಡಲು ಸಿದ್ದರಾಮಯ್ಯ ಬಿಜೆಪಿ ಪಕ್ಷದ ವಕ್ತಾರರೇ ಅಥವಾ ವರಿಷ್ಠರೇ?. ಈ ವಿಚಾರದ ಬಗ್ಗೆ ಮಾತನಾಡಲು ಅವರಿಗೆ ನೈತಿಕ ಹಕ್ಕು ಇಲ್ಲ. ಬಿಎಸ್ವೈ ಅವರೇ ಮುಂದಿನ ಎರಡೂವರೆ ವರ್ಷ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ" ಎಂದು ಹೇಳಿದರು.
ಸಂಪುಟ ವಿಸ್ತರಣೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಇದು ಸಿಎಂ ಅವರ ಪರಮಾಧಿಕಾರವಾಗಿದೆ. ಸಂಪುಟಕ್ಕೆ ಎಷ್ಟು ಮಂದಿ ಶಾಸಕರನ್ನು ಸೇರ್ಪಡೆ ಮಾಡಿಕೊಳ್ಳಬೇಕು ಎನ್ನುವ ಬಗ್ಗೆ ಅವರೇ ತೀರ್ಮಾನ ಮಾಡುತ್ತಾರೆ" ಎಂದರು.
"ನಾನು ಬೆಳಗಾವಿ ಸಂಸದ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ. ನನಗೆ ಈ ಬಗ್ಗೆ ಆಸೆಯೂ ಇಲ್ಲ. ಅಲ್ಲದೇ ಚುನಾವಣೆ ಇನ್ನೂ ಕೂಡಾ ಘೋಷಣೆಯಾಗಿಲ್ಲ" ಎಂದು ತಿಳಿಸಿದರು.
"ರಾಜ್ಯದಲ್ಲಿ ಶೇ. 60ರಷ್ಟು ಗ್ರಾ. ಪಂ. ಸ್ಥಾನಗಳಲ್ಲಿ ಬೆಜೆಪಿ ಬೆಂಬಲಿತ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಜಯಶಾಲಿಯಾದ ಅಭ್ಯರ್ಥಿಗಳಿಗೆ ಅಭಿನಂದನೆ ಸಲ್ಲಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಜನ ಸೇವಕ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಸಮಾವೇಶದ ಜ.17ರಂದು ನಡೆಯಲ್ಲಿದ್ದು, ಈ ಸಂದರ್ಭ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಪಾಲ್ಗೊಳ್ಳಲಿದ್ದಾರೆ" ಎಂದು ಹೇಳಿದರು.