ಬೆಂಗಳೂರು, ಜ.11 (DaijiworldNews/PY): "ಬಿಜೆಪಿ ಹೈಕಮಾಂಡ್ ಸಚಿವ ಸಂಪುಟ ವಿಸ್ತರಣೆಗೆ ಸಮ್ಮತಿ ನೀಡಿದ್ದು, ಏಳು ಮಂದಿ ಶಾಸಕರು ಸಂಪುಟ ಸೇರ್ಪಡೆಯಾಗಲಿದ್ದಾರೆ. ಜ.13ರಂದು ನೂತನ ಸಚಿವರ ಪ್ರಮಾಣ ವಚನ ನೆರವೇರಲಿದ್ದು, ಏಳು ಸಚಿವರ ಹೆಸರುಗಳನ್ನು ಸೋಮವಾರ ತಿಳಿಸುತ್ತೇನೆ" ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಬಿಜೆಪಿ ಹೈಕಮಾಂಡ್ ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್ ನೀಡಿದೆ. ಕೆಐಎಬಿಯಿಂದ ಹೊರ ಬರುತ್ತಿದ್ದಂತೆ ಬಿಜೆಪಿ ವರಿಷ್ಠರು ಸಿಎಂ ಬಿಎಸ್ವೈ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆ ಸಿಎಂ ಬಿಎಸ್ವೈ ಅವರಿಗೆ ಸಚಿವ ಸಂಪುಟ ವಿಸ್ತರಣೆ ಮಾಡಲು ಅನುಮತಿ ದೊರೆತಿದೆ.
ಜ.14ರಂದು ಸಂಕ್ರಾತಿ ಹಬ್ಬದ ಹಿನ್ನೆಲೆ ಜ.13ರಂದು ಮಧ್ಯಾಹ್ನ ನೂತನ ಸಚಿವರ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ.
"ಸಚಿವ ಸಂಪುಟಕ್ಕೆ ಯಾರೆಲ್ಲಾ ಸೇರ್ಪಡೆಯಾಗಲಿದ್ದಾರೆ ಎನ್ನುವುದನ್ನು ಸೋಮವಾರ ಪ್ರಕಟಿಸಲಾಗುವುದು" ಎಂದು ಸಿಎಂ ಬಿಎಸ್ವೈ ತಿಳಿಸಿದ್ದಾರೆ.