ಹುಬ್ಬಳ್ಳಿ, ಜ.11 (DaijiworldNews/PY): "ಈ ವರ್ಷವನ್ನು ಹೋರಾಟದ ವರ್ಷ, ಸಂಘಟನೆ ವರ್ಷ ಎಂದು ಘೋಷಣೆ ಮಾಡಿದ್ದೇವೆ. ಪ್ರತೀ ಕ್ಷೇತ್ರದ ಜನರ ಸಮಸ್ಯೆಗಳನ್ನು ಆಲಿಸಿ, ಅವರ ಅಭಿಪ್ರಾಯಗಳನ್ನು ತಿಳಿದುಕೊಂಡ ಬಳಿಕ ಅದಕ್ಕನುಗುಣವಾಗಿ ಹೋರಾಟ ಹಾಗೂ ಪಕ್ಷ ಸಂಘಟನೆ ಕಾರ್ಯ ಮಾಡುತ್ತೇವೆ" ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಪ್ರಸ್ತುತ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿನ ಸಮಸ್ಯೆಗಳೇನು?. ಜಿಲ್ಲಾ, ತಾಲೂಕು ಮಟ್ಟದಲ್ಲಿ ಯಾವ ಸಮಸ್ಯೆಗಳಿವೆ?. ಈ ಬಗ್ಗೆ ತಿಳಿಯಲು ಬ್ಲಾಕ್, ಜಿಲ್ಲಾ ಮಟ್ಟದ ಅಧ್ಯಕ್ಷರು ಹಾಗೂ ವಿವಿಧ ಘಟಕಗಳ ಅಧ್ಯಕ್ಷರೊಂದಿಗೆ ಚರ್ಚಿಸುತ್ತಿದ್ದೇವೆ. ಅವರೆಲ್ಲಾ ಅಭಿಪ್ರಾಯಗಳನ್ನು ಆಲಿಸಿದ ನಂತರ, ಪ್ರತೀ ಕ್ಷೇತ್ರದಲ್ಲೂ ಕೂಡಾ ಪ್ರತ್ಯೇಕವಾದ ಹೋರಾಟ ಮಾಡುತ್ತೇವೆ" ಎಂದಿದ್ದಾರೆ.
ಯುವ ಕಾಂಗ್ರೆಸ್ ಕಾರ್ಣಟಕದ ಘಟಕದ ರಾಜ್ಯಾಧ್ಯಕ್ಷ ಆಯ್ಕೆ ಚುನಾವಣೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಈ ಚುನಾವಣೆಯ ಪಾರದರ್ಶಕವಾಗಿ ನಡೆಯಬೇಕು. ಅಲ್ಲದೇ, ಪಕ್ಷ ಸಂಘಟನೆ ಮಾಡುವಂತ ಉತ್ತಮ ನಾಯಕನ ಆಯ್ಕೆ ಮಾಡಬೇಕು. ಈ ಹಿನ್ನೆಲೆ ರಾಜ್ಯಾಧ್ಯಕ್ಷ ಆಯ್ಕೆ ಚುನಾವಣೆಯ ವಿಚಾರದಲ್ಲಿ ನಾವು ಹಸ್ತಕ್ಷೇಪ ಮಾಡುವುದಿಲ್ಲ" ಎಂದು ತಿಳಿಸಿದ್ದಾರೆ.