ಮಂಡ್ಯ, ಜ.11 (DaijiworldNews/PY): "ಕರ್ನಾಟಕ 2023ಕ್ಕೆ ಜನತಾದಳ ರಾಜ್ಯವಾಗಲಿದೆ. ನನಗೆ ಜನತೆ ಒಮ್ಮೆ ಐದು ವರ್ಷ ಅವಕಾಶ ಕಲ್ಪಿಸಲಿ. ಸಿಎಂ ಹೇಗೆ ಕೆಲಸ ಮಾಡಬೇಕು ಎನ್ನುವುದನ್ನು ತೋರಿಸಿಕೊಡುತ್ತೇನೆ. ಇಲ್ಲವಾದಲ್ಲಿ ಪಕ್ಷವನ್ನೇ ವಿಸರ್ಜಿಸುತ್ತೇನೆ" ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
"ಬಿಜೆಪಿ ನಾಯಕರು ರಾಮರಾಜ್ಯದ ವಿಚಾರದ ಬಗ್ಗೆ ಮಾತನಾಡುತ್ತಾರೆ. ಆದರೆ, ರಾಜ್ಯದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯವನ್ನು ತಡೆಯಲಾಗುತ್ತಿಲ್ಲ. ರಾಜ್ಯ ಸರ್ಕಾರದಲ್ಲಿ ಹಣ ಇಲ್ಲ ಎಂದು ಹೇಳುತ್ತಿದ್ದಾರೆ. ಆದರೆ, ಲೂಟಿ ಮಾಡಲು ಹಣವಿದೆ. ಚುನಾವಣೆ ಘೋಷಣೆಯಾಗಲಿ, ಎಲ್ಲಾ ವಿಚಾರವನ್ನು ಜನರ ಮುಂದಿಡುತ್ತೇನೆ" ಎಂದು ತಿಳಿಸಿದ್ದಾರೆ.
"ನಾನು 25 ಸಾವಿರ ಕೋಟಿ ಸಾಲಮನ್ನಾ ಮಾಡಿ ಕಮಿಷನ್ ಪಡೆದುಕೊಂಡಿದ್ದೇನಾ?. ರೈತರ ಸಾಲಮನ್ನಾ ಮಾಡಿದರೆ ಕಮಿಷನ್ ದೊರಕುವುದಿಲ್ಲ. ಹಾಗಾಗಿ ಬಿಜೆಪಿ ಎಲ್ಲಿಯೂ ಕೂಡಾ ಸಾಲಮನ್ನಾ ಮಾಡಿಲ್ಲ" ಎಂದಿದ್ದಾರೆ.
ನಟಿ ರಾಧಿಕಾ ಕುಮಾರಸ್ವಾಮಿ ಸಿಸಿಬಿ ವಿಚಾರಣೆ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, "ರಾಧಿಕಾ ಯಾರು ಎಂದು ನನಗೆ ತಿಳಿದಿಲ್ಲ. ನನಗೆ ಸಂಬಂಧವಿಲ್ಲದ ವಿಚಾರದ ಬಗ್ಗೆ ಕೇಳಬೇಡಿ" ಎಂದು ಹೇಳಿದ್ದಾರೆ.