ಬೆಂಗಳೂರು,ಜ.10 (DaijiworldNews/HR): ಕೇಂದ್ರ ಮತ್ತು ರಾಜ್ಯ ಸರಕಾರ ಜಾರಿಗೊಳಿಸಿರುವ ಕೃಷಿ ಮಸೂದೆಯನ್ನು ವಿರೋಧಿಸಿ ಕಾಂಗ್ರೆಸ್ ಪಕ್ಷ ಬೀದಿಗಿಳಿದು ಹೋರಾಟ ನಡೆಸುವುದರ ಜೊತೆಗೆ 'ಜೈಲ್ ಭರೋ ಚಳವಳಿ' ಹಮ್ಮಿಕೊಳ್ಳಲಾಗುವುದು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಕುರಿತು ಬಿಜೆಪಿ ಸರ್ಕಾರಗಳ ಐದು ಕಾಯ್ದೆಗಳು, ಅಸಂಖ್ಯಾತ ಸುಳ್ಳುಗಳು ಎಂಬ ಕಿರು ಹೊತ್ತಿಗೆಯನ್ನು ಭಾನುವಾರ ಬಿಡುಗಡೆ ಮಾಡಿ ಬಳಿಕ ಮಾತನಾಡಿದ ಅವರು, "ಕೇಂದ್ರ ಮತ್ತು ರಾಜ್ಯ ಸರ್ಕಾರ ಜಾರಿಗೆ ತಂದಿರುವ ಐದು ರೈತ ವಿರೋಧಿ ಕಾಯ್ದೆಗಳ ಸತ್ಯಾಸತ್ಯತೆ ಜನರಿಗೆ ತಿಳಿಸುವ ವಿಚಾರಗಳನ್ನು ಒಳಗೊಂಡ ಕಿರು ಪುಸ್ತಕ ಬಿಡುಗಡೆ ಮಾಡಿದ್ದೇವೆ. ಜನರಿಗೆ ಸತ್ಯ ತಿಳಿಸುವುದು ನಮ್ಮ ಪ್ರಯತ್ನವಾಗಿದೆ" ಎಂದರು.
ಇನ್ನು "ರೈತರ ರಕ್ಷಣೆಗಾಗಿ ಕಾಂಗ್ರೆಸ್ ಬೀದಿಗಳಿದು ಹೋರಾಟ ಮಾಡಲಿದೆ. ಜೊತೆಗೆ ಜೈಲ್ ಭರೋ ಚಳವಳಿ ಹಮ್ಮಿಕೊಳ್ಳಲಾಗುವುದು. ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಹೋರಾಟದ ರೋಪುರೇಷೆ ಸಿದ್ದಪಡಿಸಲಾಗುವುದು" ಎಂದು ಹೇಳಿದ್ದಾರೆ.